ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

 ನೈಸರ್ಗಿಕ ಕೃಷಿ ಕಾರ್ಯಾಗಾರ, ಕೃಷಿ ಮೇಳ ಕಾರ್ಯಸೂಚಿಯಲ್ಲಿ ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್ ಕರೆ

ದಾವಣಗೆರೆ, ಏ.26-  ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್ ರೈತರಿಗೆ ಕರೆ ನೀಡಿದರು.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಐಸಿಎಆರ್‌ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಆತ್ಮ ಯೋಜನೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರೈತರ ಪಾಲ್ಗೊಳ್ಳುವಿಕೆ-ನಮ್ಮ ಪ್ರಥಮ ಆದ್ಯತೆ ಶೀರ್ಷಿಕೆಯಡಿ ನೈಸರ್ಗಿಕ ಕೃಷಿ ಕಾರ್ಯಾಗಾರ ಮತ್ತು ಕೃಷಿ ಮೇಳ ಕಾರ್ಯಸೂಚಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ದೇಶಗಳಲ್ಲಿ ಆಹಾರದ ಬಗ್ಗೆ ಅರಿವೇ ಇಲ್ಲದ ವೇಳೆ ಆಹಾರವನ್ನು ಬೇಯಿಸಿ ತಿನ್ನುವ, ಬಟ್ಟೆ ಧರಿಸುವ  ಬಗ್ಗೆ ತಿಳಿಸಿಕೊಟ್ಟ ದೇಶ ಭಾರತ. ಪೂರ್ವಜರ ಕೃಷಿ ಪದ್ಧತಿ ಇಂದಿಗೂ ಮಾದರಿಯಾಗಿದೆ. ಆದರೆ ಸ್ವಾರ್ಥಕ್ಕಾಗಿ ನಾವು ರಾಸಾಯನಿಕ ಕೃಷಿಗೆ ಮಾರುಹೋಗಿದ್ದೇವೆ. ಆದರೆ ಕಾಲ ಬದಲಾಗುತ್ತಿದ್ದು ಈಗ ಮಾತ್ರ ನೈಸರ್ಗಿಕ ಕೃಷಿ ಅಗತ್ಯವಾಗಿದೆ ಎಂದರು.

ಕೊರೊನಾ ಸಮಯದಲ್ಲಿ ಪ್ರಪಂಚದ ಹಲವು ರಾಷ್ಟ್ರಗಳಿಗೆ ಲಸಿಕೆ ಕಳುಹಿಸಿಕೊಟ್ಟ ಕೀರ್ತಿ ಭಾರತ ದೇಶದ್ದು. ಪ್ರಪಂಚಕ್ಕೆ ಒಳಿತು ಮಾಡುವ ಶಕ್ತಿ -ಸಾಮರ್ಥ್ಯ ಈ ಮಣ್ಣಿನಲ್ಲಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯಿಂದ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ  ನಗರದ ನಾಗರಿಕರಿಗೆ ತಾರಸಿ ತೋಟ ಮಾಡುವ ಬಗ್ಗೆ ತರಬೇತಿ ನೀಡಿ, ಅರಿವು ಮೂಡಿಸುವ ಚಿಂತನೆ ಇದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಮಾತನಾಡುತ್ತಾ, ಆಹಾರೋತ್ಪಾದನೆ ಹೆಚ್ಚಿಸಿಕೊಳ್ಳಲು ನಮ್ಮ ದೇಶದಲ್ಲಿ ಹಸಿರು ಕ್ರಾಂತಿ ಅನಿವಾರ್ಯವಾಗಿತ್ತು. ಹೆಚ್ಚು ರಾಸಾಯನಿಕ ಬಳಕೆಯಿಂದ ಉತ್ಪಾದನೆ ಹೆಚ್ಚಾಗಿ ರೈತರಿಗೆ ಮಾರುಕಟ್ಟೆ ದರ ಕಡಿಮೆಯಾಯಿತು. ಸಮಗ್ರ ಕೃಷಿ ಪದ್ದತಿ, ನಿಖರ ಕೃಷಿ ಪದ್ಧತಿ ನಂತರ ಇದೀಗ ನೈಸರ್ಗಿಕ ಕೃಷಿ ಪದ್ದತಿಗೆ ಮರಳಬೇಕಾಗಿದೆ. ಜೊತೆಗೆ ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಿಸಿ, ಸಿದ್ಧ ಆಹಾರವನ್ನಾಗಿಸಿ ಉತ್ತಮ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ ಟಿ.ಎನ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರೈತ ಉತ್ಪಾದಕ ಕಂಪನಿಗಳ ಮೂಲಕ ರೈತರನ್ನು ತಲುಪುವ ಉದ್ದೇಶ ಸರ್ಕಾರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಉತ್ಪಾದಕ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿವೆ ಎಂದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 10 ಸಾವಿರ ರೈತ ಉತ್ಪಾದಕ ಕಂಪನಿಗಳಿಗೆ ಹಣ ಮೀಸಲಿಟ್ಟಿದೆ. ಮುಖ್ಯಮಂತ್ರಿಗಳೂ ಸಹ ರಾಜ್ಯದಲ್ಲಿ 750 ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸುವ ಆಶಯ ಹೊಂದಿದ್ದು, ಕಾರ್ಯಪ್ರವೃತ್ತರಾಗಿದ್ದಾರೆ. ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಸಂಪನ್ಮೂಲ ಸಂಸ್ಥೆಯಾಗಿ ಭಾಗಿಯಾಗಲಿದೆ. ಈಗಾಗಲೇ ದಾವಣಗೆರೆಯಲ್ಲಿ 7, ಚಿತ್ರದುರ್ಗ ಹಾಗೂ ಹಾವೇರಿಯಲ್ಲಿ ತಲಾ ಐದರಂತೆ ರೈತ ಉತ್ಪಾದಕ ಕಂಪನಿಗಳು ಆರಂಭವಾಗಿವೆ ಎಂದು ಹೇಳಿದರು.

ಮಲ್ಲನಾಯಕನಹಳ್ಳಿ ಪ್ರಗತಿ ಪರ ರೈತ ರಾಘವ ನೈಸರ್ಗಿಕ ಕೃಷಿಯ ಮಹತ್ವ, ಮಣ್ಣು-ವಿಜ್ಞಾನ ವಿಷಯ ತಜ್ಞ ಸಣ್ಣಗೌಡ್ರ ಸಿರಿಧಾನ್ಯಗಳ ಮತ್ತು ಎಣ್ಣೆ ಕಾಳು ಬೆಳೆಗಳು, ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ ಅವರುಗಳು ಉಪನ್ಯಾಸ ನೀಡಿದರು.

ಹೆಚ್.ಡಿ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ಕೃಷಿ ವಿಸ್ತರಣೆ ವಿಷಯ ತಜ್ಞ ಜೆ.ರಘುರಾಜ್ ಸ್ವಾಗತಿಸಿದರು. ಆತ್ಮ ಯೋಜನೆ ಉಪ ಯೋಜನಾ ನಿರ್ದೇಶಕ ಚಂದ್ರಶೇಖರಪ್ಪ ಜಿ.ಎಂ. ವಂದಿಸಿದರು. ಬಸವನಗೌಡ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಕೃಷಿಕ ಎಂ.ಬಸವರಾಜಪ್ಪ ರೈತಗೀತೆ ಹಾಡಿದರು.