ರೈತ ಉತ್ಪಾದಕ ಕಂಪನಿಗಳು ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ

ರೈತ ಉತ್ಪಾದಕ ಕಂಪನಿಗಳು ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ

ಎಲೆಬೇತೂರು ಅಮೃತ ರೈತ ಉತ್ಪಾದಕ ಕಂಪನಿ ಸಭೆಯಲ್ಲಿ ಡಾ|| ಟಿ.ಎನ್.ದೇವರಾಜ್

ದಾವಣಗೆರೆ,ಏ.26- ರೈತ ಉತ್ಪಾದಕ ಕಂಪನಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ|| ದೇವರಾಜ ಟಿ.ಎನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೇತೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಈ ಕಂಪನಿಯ ವತಿಯಿಂದ ಮುಂದಿನ ದಿನಗಳಲ್ಲಿ ಸಾವಯವ ಬೆಲ್ಲ ತಯಾರಿಕೆ ಮತ್ತು ಮಾರಾಟ, ಕೃಷಿ ಬೆಳೆಗಳಲ್ಲಿ ದ್ವಿದಳ ಧಾನ್ಯಗಳ ಬಳಕೆ ಹೆಚ್ಚಿಸುವುದು, ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಕ್ರಮಗಳು, ಸಿರಿಧಾನ್ಯ ಬಳಕೆ ಮತ್ತು ಮಾರಾಟ, ಅಡಿಕೆಯಲ್ಲಿ ಪರ್ಯಾಯ ಮತ್ತು ಅಂತರ ಬೆಳೆಗಳು, ತೆಂಗಿನ ಉಪ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟ, ಹನಿ ನೀರಾವರಿಯಿಂದ ಕಬ್ಬಿನ ಬೆಳೆ ವಿಸ್ತೀರ್ಣ ಹೀಗೆ ಹಲವಾರು ರೈತ ಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಮಾತನಾಡಿ, ಈ ರೈತ ಉತ್ಪಾದಕ ಕಂಪನಿಯು      17 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಗುಣ ಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವುದರ ಜೊತೆಗೆ ಉತ್ತಮ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಬೇತೂರು ಕಂಪನಿ ನಗರಕ್ಕೆ ಹತ್ತಿರವಿದ್ದು ಕಂಪನಿಗೆ ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಕೃಷಿ ಇಲಾಖೆ ಸಿದ್ದವಿದೆ ಎಂದು  ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷಿ ಇಲಾ ಖೆಯ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ ಮಾತನಾಡಿ, ಈಗಾಗಲೇ ಬೆಲೆ ಕುಸಿತ, ಮಧ್ಯ ವರ್ತಿಗಳ ಹಾವಳಿ, ಅತೀ ವೃಷ್ಟಿ ಮತ್ತು ಅನಾವೃಷ್ಟಿ, ಹವಾ ಮಾನ ಬದಲಾವಣೆ ಹೀಗೆ ಹಲವಾರು ವಿಕೋಪಗಳನ್ನು ಎದುರಿಸುತ್ತಿರುವ ರೈತರಿಗೆ ತಂತ್ರಜ್ಞಾನ ಮತ್ತು ಆರ್ಥಿಕ ಸದೃಢತೆಯನ್ನು ತಂದು ಕೊಡುವಲ್ಲಿ ರೈತ ಉತ್ಪಾದಕ ಕಂಪನಿಗಳು ವರದಾನವಾಗಲಿವೆ ಎಂದು ತಿಳಿಸಿದರು.

ಕಂಪನಿಯ ಅಧ್ಯಕ್ಷ ನರೇಂದ್ರ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಬಸವನಗೌಡ ಎಂ.ಜಿ, ಕಂಪನಿಯ ಉಪಾಧ್ಯಕ್ಷ  ಸತೀಶ್, ನಿರ್ದೇಶಕರುಗಳು, ಗ್ರಾಮದ ಮುಖಂಡರಾದ ಬಸವರಾಜಪ್ಪ, ಲಿಂಗರಾಜು, ಪ್ರಭು, ರಾಜಪ್ಪ, ಷಡಾಕ್ಷರಪ್ಪ ಇತರರು ಹಾಜರಿದ್ದರು.