ರಾಣೇಬೆನ್ನೂರು ಬಿಜೆಪಿಯಲ್ಲಿ ಬಿರುಕು ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಮನವಿ

ರಾಣೇಬೆನ್ನೂರು ಬಿಜೆಪಿಯಲ್ಲಿ ಬಿರುಕು  ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಮನವಿ

ರಾಣೇಬೆನ್ನೂರು, ಏ.26- ಕೆಪಿಜೆಪಿಯಿಂದ ಆಯ್ಕೆಯಾದವರೂ ಸೇರಿದಂತೆ ಸ್ಪಷ್ಟ ಬಹುಮತದೊಂದಿಗೆ ರಾಣೇಬೆನ್ನೂರು ನಗರಸಭೆಯ ಅಧಿಕಾರ ಹಿಡಿದಿದ್ದ ಬಿಜೆಪಿಯಲ್ಲೀಗ ಬಿರುಕು ಬಿಟ್ಟಿದ್ದು, ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಶಾಸಕರು ಹಾಗೂ ಸರ್ಕಾರದ ನಾಮಕರಣ ಸದಸ್ಯರು ಸೇರಿದಂತೆ ಅವಿಶ್ವಾಸ ಮಂಡಿಸುವಂತೆ ಒತ್ತಾಯಿಸಿದ ಮನವಿಗೆ 16 ಜನರು ಸಹಿ ಮಾಡಿರುವರೆಂದು ಹೇಳಲಾಗುತ್ತಿದೆ. ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸಹ ಅವಿಶ್ವಾಸ ಮಂಡನೆಗೆ ಕುಮ್ಮಕ್ಕು ನೀಡಿರಬಹುದು ಎನ್ನುವ ಸುದ್ದಿ ನಗರದಲ್ಲಿ ಕೇಳಿಬರುತ್ತಿದೆ.

ನಗರಾಧ್ಯಕ್ಷ ಸ್ಥಾನಕ್ಕೆ ರೂಪಾ ಚಿನ್ನಿಕಟ್ಟಿ ಅವರು ಕಳೆದ ತಿಂಗಳು ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂದೆ ಪಡೆದಿದ್ದರು. ಸದಸ್ಯರಲ್ಲಿ ಭಿನ್ನಾಭಿಪ್ರಾಯ ಸರಿಪಡಿಸುವ ಪ್ರಯತ್ನ  ಜಿಲ್ಲೆಯ ವರಿಷ್ಠರಿಂದಾಗದಿದ್ದರಿಂದ, ರಾಜ್ಯದ ವರಿಷ್ಠರ ಬಳಿ ಚರ್ಚೆ ನಡೆಯುವ ಹಂತದಲ್ಲಿಯೇ ಅವಿಶ್ವಾಸದ ಮನವಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಆತ್ಮೀಯರಾದ ಶಿಕಾರಿಪುರದ ರೂಪಾ ಚಿನ್ನಿಕಟ್ಟಿ ಅವರು, ಬಿಎಸ್‌ವೈ ಕುಟುಂಬದ ಕೃಪಾಶಿರ್ವಾದದಿಂದಲೇ ಅಧ್ಯಕ್ಷರಾಗಿದ್ದರು ಹಾಗೂ ಅವರಿಂದ ನಗರದ ಅಭಿವೃದ್ಧಿಗೆ ಅನೇಕ ಅನುದಾನಗಳನ್ನು ತಂದಿದ್ದರಲ್ಲದೇ ಕಳೆದ ತಿಂಗಳು ರಾಣೇಬೆನ್ನೂರಿನ ಕಾರ್ಯಕ್ರಮವೊಂದರಲ್ಲಿ ತವರು ಮನೆ ಉಡುಗೊರೆಯಾಗಿ ರಾಣೇಬೆನ್ನೂರಿಗೆ ಇನ್ನೂ ಹೆಚ್ಚೆಚ್ಚು ಅನುದಾನ ಕೊಡುವುದಾಗಿ ಸಂಸದ ರಾಘವೇಂದ್ರ ಅವರು ಘೋಷಣೆ ಸಹ ಮಾಡಿದ್ದರು.