ನಾಟಕ ನೋಡಿ ಸದ್ಗುಣ ಬೆಳೆಸಿಕೊಳ್ಳಿ

ನಾಟಕ ನೋಡಿ ಸದ್ಗುಣ ಬೆಳೆಸಿಕೊಳ್ಳಿ

ಸತ್ಯ ಹರಿಶ್ಚಂದ್ರ ನಾಟಕ ಯಾರಿಗೂ ಬೇಕಿಲ್ಲದ್ದು

ಮೂರು ದಿನಗಳ ನಾಟಕೋತ್ಸವದಲ್ಲಿನ ಮೂರೂ ನಾಟಕಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ಆದರೆ ನಮ್ಮದು ಮತ್ತೊಂದು ನಾಟಕವಿದೆ ಅದು `ಸತ್ಯಹರಿಶ್ಚಂದ್ರ’ ಇಂದು ಅದು ಯಾರಿಗೂ ಬೇಕಿಲ್ಲ. ಇದು ನಮಗೆ ಮೌಲ್ಯಗಳು, ಆದರ್ಶಗಳು ಬೇಕಿಲ್ಲ ಎಂಬುದನ್ನು ತೋರಿಸುತ್ತದೆ. ಅವುಗಳನ್ನು ಗಾಳಿಗೆ ತೂರಿ ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಡಾ.ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ಹರಿಶ್ಚಂದ್ರ ಸತ್ಯಕ್ಕಾಗಿ ರಾಜ್ಯ, ಹೆಂಡತಿ, ಮಗು ಕಳೆದುಕೊಳ್ಳುತ್ತಾನೆ. ತನ್ನನ್ನೇ ಮಾರಿಕೊಳ್ಳುತ್ತಾನೆ. ಅವನಲ್ಲಿ ಪ್ರಾಮಾಣಿಕತೆ, ನೈತಿಕ ತಾಕತ್ತು. ಸತ್ಯವನ್ನು ಎತ್ತಿ ಹಿಡಿಯುವ ಗುಣ ಇದೆ. ಎಷ್ಟೇ ಕಷ್ಟ ಅನುಭವಿಸಿದರೂ ತನ್ನ ತನ ಉಳಿಸಿಕೊಳ್ಳುತ್ತಾನೆ. ಕೊನೆಗೆ ಅವನ ವ್ಯಕ್ತಿತ್ವ  ಎಲ್ಲರೂ ಗೌರವಿಸುವ ಹಾಗೆ ಮಾಡುತ್ತದೆ ಎಂದರು.

ದಾವಣಗೆರೆ, ಏ. 26- ಕೇವಲ ನಾಟಕ ನೋಡಿ ಖುಷಿ ಪಡದೆ, ನಾಟಕದ ಸಾರವನ್ನು ಮೈಗೂಡಿಸಿಕೊಂಡು, ಬದುಕಿನ ಅವಗುಣಗಳನ್ನು ದೂರ ಮಾಡಿಕೊಂಡು ಸದ್ಗುಣ ಮೈಗೂಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ  ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಸ್ನೇಹ ಬಳಗದಿಂದ ವಿದ್ಯಾನಗರದಲ್ಲಿ ಹಮ್ಮಿಕೊಂಡಿದ್ದ ಶಿವಸಂಚಾರ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಯಾವುದೇ ನಾಟಕದ ಮೂಲ ಆಶಯ ಜನರನ್ನು ಜಾಗೃತಗೊಳಿಸಿ,  ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿ, ಬದುಕಿನಲ್ಲಿರಬಹುದಾದ ಕತ್ತಲೆ ಕಳೆಯುವಂತಹದ್ದೇ ಆಗಿದೆ. ಕೆಲವರು ವೇಷ, ಬಣ್ಣ, ರಂಗ ಮಂದಿರ ಇಲ್ಲದೆಯೇ  ನಾಟಕ ಮಾಡುತ್ತಾರೆ. ಆದರೆ ರಂಗ ಮಂದಿರದ ಮೇಲೆ ನಾಟಕ ಮಾಡುವವರು ಸಮಾಜಕ್ಕೆ ಹಿಡಿದ ಕನ್ನಡಿಯಂತೆ. ಸಮಾಜದಲ್ಲಿನ ಹುಳುಕು, ಒಳಿತನ್ನು ಯಥಾವತ್ತಾಗಿ ತೋರಿಸಿ ಜನರ ಬದುಕು ಅರಳಸುವ ಕಾರ್ಯ ಮಾಡುತ್ತಾರೆ ಎಂದು ನುಡಿದರು.

ಕಳೆದ 25 ವರ್ಷಗಳಿಂದ ಶಿವ ಸಂಚಾರ ಸುಮಾರು 75 ನಾಟಕಗಳ 3 ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಕರ್ನಾಟಕದ ಒಳಗೆ ಹಾಗೂ ಹೊರಗಷ್ಟೇ ಅಲ್ಲ ಅಮೆರಿಕಾ, ಆಸ್ಟ್ರೇಲಿಯಂ ಮುಂತಾದ ಕಡೆ ಅಭಿನಯಂಸಿರಿ ಜನರಲ್ಲಿ ರಂಗಾಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಒಂದು ನಾಟಕ ಸಮಾಜಕ್ಕೆ ಸಂದೇಶ ಕೊಡದಿದ್ದರೆ ಅದು ಉತ್ತಮ ನಾಟಕವೆನಿಸದು. ಆ ಸಂದೇಶ ಜನರಲ್ಲಿ ಉಲ್ಲಾಸ, ಕ್ರಿಯಾಶೀಲತೆ ಬೆಳೆಸಬೇಕು. ಜಾಢ್ಯವನ್ನು ತೊಡೆದು ಹಾಕಬೇಕು. ಆ ಕೆಲಸವನ್ನು ನಮ್ಮ ರಂಗ ಕಲಾವಿದರು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ರಂಗಭೂಮಿಯ ಜೊತೆ ಸಮಾಜದ ಬೇರೆ ಬೇರೆ  ಭಾಗಗಳಲ್ಲಿ ಸಂಚರಿಸಿ  ಜನರನ್ನು ಜಾಗೃತಿಗೊಳಿಸುತ್ತಾ, ಜನರಲ್ಲಿನ ಅಜ್ಞಾನ ನಿವಾರಣೆ ಮಾಡುವ ಕಾರ್ಯವನ್ನೂ 45 ವರ್ಷಗಳಿಂದ ಮಾಡುತ್ತಿದ್ದೇವೆ. ಈ  ಅವಧಿಯಲ್ಲಿ ಸಂಗೀತ, ಸಾಹಿತ್ಯ, ಕಲೆ, ಶಿಕ್ಷಣ, ರಂಗಭೂಮಿ ಇವೆಲ್ಲವನ್ನೂ ಒಳಗೊಂಡು ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲಾಗಿದೆ. ಇದರ ಮೂಲ ಉದ್ದೇಶ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಸಂಘಟನೆ ಒಡೆಯಬಾರದು. ನಾಡಿನಲ್ಲಿ ತಲೆ ಎತ್ತಿ ಬಾಳಬೇಕು ಎನ್ನುವುದು. ನಾಟಕಗಳ ಉದ್ದೇಶವೂ ಅದೇ ಆಗಿದೆ ಎಂದರು.

ಹಿರಿಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಅಣ್ಣನ ಬಳಗ, ಅಕ್ಕನ ಬಳಗ, ಕಲಾ ಸಂಘದ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು. ಅದನ್ನೇ ಮತ್ತೊಂದು ರೀತಿಯಲ್ಲಿ ನಮ್ಮ ಕಲಾ ಸಂಘ ಮಾಡುತ್ತಿದೆ ಎಂದು ಹೇಳಿದರು.

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಮನುಷ್ಯನನ್ನು ತಿದ್ದುವ ಶಕ್ತಿ ನಾಟಕಕ್ಕಿದೆ. ಪ್ರಸ್ತುತ ಧಾರ್ಮಿಕ ಕಲುಷಿತ ವಾತಾವರಣದಲ್ಲಿ ಸಾಣೇಹಳ್ಳಿ ಶ್ರೀಗಳು ನಾಟಕ ಶಾಲೆ ತೆರೆದು ಶ್ರೇಷ್ಟ ನಿರ್ದೇಶಕರನ್ನು ಕರೆಸಿ ತರಬೇತಿ ನೀಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು

ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ನಾಟಕೋತ್ಸವ ಉದ್ಘಾಟಿಸಿ ಮಾತನಾಡುತ್ತಾ, ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಇಬ್ಬರೂ ಸಹ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಭಕ್ತರು ಆ ಮಠ, ಈ ಮಠ ಎಂದು ತಿಳಿಯಬಾರದು. ಇಬ್ಬರೂ ಸ್ವಾಮೀಜಿಗಳು ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹರಡದೆ ಒಗ್ಗಟ್ಟಿನಿಂದಿರಬೇಕು ಎಂದು ಹೇಳಿದರು.

ಪಾಲಿಕೆ ಸದಸ್ಯೆ ಶ್ರೀಮತಿ ಗೀತಾ ದಿಳ್ಯೆಪ್ಪ, ಎನ್.ಜಿ. ಪುಟ್ಟಸ್ವಾಮಿ ಮಾತನಾಡಿದರು. ಶ್ರೀಮತಿ ಅಂಬುಜಾ, ಶಿವಣ್ಣ, ಕ್ರೈಂ ಬ್ರ್ಯಾಂಚ್ ಡಿವೈಎಸ್ಪಿ ಬಸವರಾಜ್ ಉಪಸ್ಥಿತರಿದ್ದರು. ವಿನೂತನ ಮಹಿಳಾ ಸಮಾಜದ ಸದಸ್ಯರು ವಚನ ಗೀತೆ ಹಾಡಿದರು. ನಿವೃತ್ತ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಬಸವರಾಜ್, ಗುರುಸಿದ್ದಲಿಂಗ ಸ್ವಾಮಿ, ಗೋಪಾಲಗೌಡ, ಹನುಮಂತಪ್ಪ, ಬಸವರಾಜ್ ಗಡ್ಡದಗೂಳಿ ಅವರುಗಳ್ನು ಸನ್ಮಾನಿಸಿ, ಗೌರವಿಸಲಾಯಿತು.