ಜಗಳೂರು : ರಸಗೊಬ್ಬರ, ಕೀಟನಾಶ, ಬಿತ್ತನೆ ಬೀಜಗಳ ಕಾಯ್ದೆಗಳ ಕುರಿತು ಉಪನ್ಯಾಸ

ಜಗಳೂರು : ರಸಗೊಬ್ಬರ, ಕೀಟನಾಶ, ಬಿತ್ತನೆ   ಬೀಜಗಳ ಕಾಯ್ದೆಗಳ ಕುರಿತು ಉಪನ್ಯಾಸ

ಜಗಳೂರು, ಏ.26- ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮದಲ್ಲಿ  ಮುಂಗಾರು ಹಂಗಾಮಿನ ಪೂರ್ವಭಾವಿ ಸಿದ್ದತೆ ಕುರಿತು ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು  ಜಂಟಿ ಕೃಷಿ ನಿದೇ೯ಶಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

 ಜಂಟಿ ಕೃಷಿ ನಿರ್ದೇಶಕರು ಪ್ರತಿ ರೈತರಿಗೆ ಪ್ರತಿ ಎಕರೆಗೆ ರಸಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಕೇಂದ್ರದಿಂದ ನೀಡಲಾಗುತ್ತದೆ, ರಸಗೊಬ್ಬರ ಕೇಂದ್ರದಿಂದ ರೈತರಿಗೆ ಹೇಗೆ ತಲ್ಲುಪುತ್ತದೆ, ಹೇಗೆ ರಾಜ್ಯಗಳಿಗೆ ಮತ್ತು ಜಿಲ್ಲಾ ತಾಲ್ಲೂಕುಗಳಿಗೆ ಸರಬರಾಜು ಆಗುತ್ತದೆ ಕುರಿತು ಮಾಹಿತಿಯನ್ನು ನೀಡಿದರು. 

ಎಲ್ಲ ಪರಿಕರ ಮಾರಾಟಗಾರರಿಗೆ ಪಿ.ಓ.ಎಸ್. ಯಂತ್ರಗಳನ್ನು ಅಪ್‌ಡೇಟ್ ಮಾಡಲು, ದರ ಪಟ್ಟಿಯನ್ನು ಲಗತ್ತಿಸಲು ತಿಳಿಸಿದರು. ತಾಲ್ಲೂಕಿನ ಮಾರಾಟಗಾರರು ಬೇರೆ ತಾಲ್ಲೂಕುಗಳಿಗೆ ಮಾರುವಂತಿಲ್ಲ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕರ ಸುನೀಲ್‌ ಕುಮಾರ್ ಅವರು ರಸಗೊಬ್ಬರ, ಕೀಟನಾಶ ಹಾಗೂ ಬಿತ್ತನೆ  ಬೀಜಗಳ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.

 ಸಹಾಯಕ ಕೃಷಿ ನಿರ್ದೇಶಕರು ಗೋವರ್ಧನ್ ಇವರು ಕಾನೂನು ಉಲ್ಲಂಘನೆ ಮಾಡಿದರೆ ಆಗುವ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು.

ಉಪ ಕೃಷಿ ನಿರ್ದೇಶಕರು ಆರ್. ತಿಪ್ಪೇಸ್ವಾಮಿ ಅವರು ಗೊಬ್ಬರದ ಬೇಡಿಕೆ, ಮಾರಾಟದ ದಾಖಲೆ ಮಾಹಿತಿ ನೀಡಿದರು.

ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಅಧ್ಯಕ್ಷ ಸಿದ್ದೇಶ್ ಮಾತನಾಡಿ, ಅಧಿಕಾರಿಗಳು ತಿಳಿಸಿರುವ ಹಾಗೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ  ಗೌರವ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿಗಳು ನಾಗರಾಜ, ಸಹಾಯಕ ಕೃಷಿ ನಿರ್ದೇಶಕ ಮಂಜಣ್ಣ ಮತ್ತು ಇತರರು ಭಾಗವಹಿಸಿದ್ದರು.  ಜಗದೀಶ್‌ ವಂದಿಸಿದರು.