ಜಗಳೂರಿನ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾಡಿದ್ದು ಮುಖ್ಯಮಂತ್ರಿ

ಜಗಳೂರಿನ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾಡಿದ್ದು ಮುಖ್ಯಮಂತ್ರಿ

ಎಲ್ಲಾ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬೀಳಗಿ ಸೂಚನೆ

ದಾವಣಗೆರೆ, ಏ.26- ಜಗಳೂರು ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ದಿನಾಂಕ 29 ರಂದು ಜಗಳೂರಿಗೆ ಆಗಮಿಸುತ್ತಿದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಂಬಂಧಿಸಿದ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗಿನ ಪೂರ್ವ ಸಿದ್ದತಾ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಗಳೂರು ತಾಲ್ಲೂಕಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿ ಕುರಿತ ಕಾರ್ಯಕ್ರಮ ಇದಾಗಿದ್ದು, ಅನೇಕ ಹಿರಿಯ ಸಚಿವರುಗಳು ಭಾಗವಹಿಸುತ್ತಿದ್ದಾರೆ. 

ಎಲ್ಲಾ ಇಲಾಖೆ ಅಧಿಕಾರಿಗಳು 2021ರ ಏಪ್ರಿಲ್‍ನಿಂದ 2022ರ ಏಪ್ರಿಲ್‍ವರೆಗೆ ಸವಲತ್ತುಗಳನ್ನು ಪಡೆದ ಫಲಾನುಭವಿಗಳನ್ನು ಕರೆತರುವಂತೆ ತಿಳಿಸಿ, ಫಲಾನುಭವಿಗಳು ಹೋಗುವ ವ್ಯವಸ್ಥೆಯನ್ನು ಆಯಾ ಇಲಾಖೆಯವರೇ ಮಾಡಬೇಕೆಂದು ತಿಳಿಸಿದರು.  

ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.