ಇಳುವರಿ ಸಂಸ್ಕರಣೆಯಿಂದ ಹೆಚ್ಚು ಆದಾಯ

ಇಳುವರಿ ಸಂಸ್ಕರಣೆಯಿಂದ ಹೆಚ್ಚು ಆದಾಯ

ನೀರಾವರಿ, ಮೌಲ್ಯವರ್ಧನೆ, ಮಾರುಕಟ್ಟೆ ಮೂಲಕ ರೈತರಿಗೆ ನೆರವು : ಈರಣ್ಣ ಕಡಾಡಿ

ದಾವಣಗೆರೆ, ಏ. 26 – ರೈತರಿಗಾಗಿ ನೀರಾವರಿ, ಮೌಲ್ಯವರ್ಧನೆ ಮಾರುಕಟ್ಟೆಯ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ ಎಂದಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ರೈತರ ಆದಾಯ ದ್ವಿಗುಣಗೊಳಿಸಿ ಹೆಚ್ಚಿನ ಜನರು ಕೃಷಿಯತ್ತ ಆಕರ್ಷಿತರಾಗು ವಂತೆ ಮಾಡಬೇಕಿದೆ ಎಂದಿದ್ದಾರೆ.

ನಗರದ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಆತ್ಮನಿರ್ಭರ ಕೃಷಿ ಮತ್ತು ಸಿರಿ ಧಾನ್ಯಗಳ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ದೇಶದ ಅಗತ್ಯದ ಶೇ.65ರಷ್ಟು ಅಡುಗೆ ಎಣ್ಣೆ ಆಮದಾಗುತ್ತಿದೆ. ಇದಕ್ಕಾಗಿ ದೇಶ 1.75 ಲಕ್ಷ ಕೋಟಿ ರೂ.ಗಳನ್ನು ಪಾವತಿಸುತ್ತಿದೆ. ಇದರ ಬದಲು ದೇಶದ ರೈತರು ತಾವೇ ಖಾದ್ಯ ಬೀಜಗಳನ್ನು ಹೆಚ್ಚಾಗಿ ಬೆಳೆಯಬೇಕು. 2-3 ಲಕ್ಷ ರೂ.ಗಳ ಹೂಡಿಕೆ ಮಾಡಿದರೆ ತಾವೇ ಎಣ್ಣೆ ಸಂಸ್ಕರಿಸಿ ಉತ್ತಮ ಬೆಲೆಗೆ ಮಾರಬಹುದು ಎಂದವರು ತಿಳಿಸಿದರು.

ಸಿರಿಧಾನ್ಯ ಬೆಳೆಯಲು ಸರ್ಕಾರ ಎಕರೆಗೆ 10 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದೆ. ಮಾರುಕಟ್ಟೆಗೂ ವ್ಯವಸ್ಥೆ ಮಾಡಿದೆ. ಸರ್ಕಾರ ನೀಡುವ ನೆರವು ಪಡೆದು ಸಿರಿಧಾನ್ಯ ಬೆಳೆದರೆ ಉತ್ತಮ ಆದಾಯ ಸಾಧ್ಯ ಎಂದು ಕಡಾಡಿ ತಿಳಿಸಿದರು.

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಯೋಜನೆಗಳನ್ನು ಪಕ್ಷದ ರೈತ ಮೋರ್ಚಾ ಮುಖಂಡರು ರೈತರಿಗೆ ತಲುಪಿಸಲು ನೆರವಾಗಬೇಕು ಎಂದವರು ಕರೆ ನೀಡಿದರು.

ಈ ಹಿಂದೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೃಷಿಗೆ 21,933 ಕೋಟಿ ರೂ. ಮಾತ್ರ ಕೊಡಲಾಗುತ್ತಿತ್ತು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ವರ್ಷಗಳಲ್ಲಿ ಕೃಷಿ ಬಜೆಟ್ ಮೊತ್ತ 1,32,523 ಕೋಟಿ ರೂ.ಗಳಿಗೆ ತಲುಪಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರು ಆತ್ಮಗೌರವದಿಂದ ಜೀವನ ನಡೆಸಲು, ಆತ್ಮನಿರ್ಭರ ಭಾರತದಲ್ಲಿ ಕಷ್ಟ ಎದುರಿಸಬಾರದು ಎಂದು ಮೋದಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಮಾತನಾಡಿ, ದಾವಣಗೆರೆಯನ್ನು ಸಿರಿಧಾನ್ಯ ಜಿಲ್ಲೆಯಾಗಿ ಆಯ್ಕೆ ಮಾಡಲಾಗಿದೆ. ಸಿರಿಧಾನ್ಯಗಳ ಸಂಸ್ಕರಣೆ ಸಮಸ್ಯೆ ಬಗೆಹರಿಸಲು ಎಫ್.ಪಿ.ಒ. ಮೂಲಕ 22 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಬಿ.ಪಿ. ಹರೀಶ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ. ಜೀವನಮೂರ್ತಿ, ಮೇಯರ್ ಜಯಮ್ಮ ಗೋಪಿನಾಯ್ಕ,  ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಬಿಜೆಪಿ ಮುಖಂಡರಾದ ಕೊಳೇನಹಳ್ಳಿ ಸತೀಶ್, ರೇವಣಸಿದ್ದಪ್ಪ, ಶಿರಮನಹಳ್ಳಿ ಮಂಜಣ್ಮ, ಪರಮಶ್ವರಪ್ಪ, ಬೇವಿನಹಳ್ಳಿ ಕೆಂಚನಗೌಡ್ರು, ಸಂಗನಗೌಡ್ರು, ಶಾಮನೂರು ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.