40% ಕಮೀಷನ್ನಿಂದ ಕಾಮಗಾರಿಗಳಿಗೆ ಧಕ್ಕೆ : ಶಾಮನೂರು ಮಲ್ಲಿಕಾರ್ಜುನ್ ತರಾಟೆ
ಕುಂದುವಾಡ ಕೆರೆ ಏರಿ ಹೆಚ್ಚು, ನೀರು ಕಡಿಮೆ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ
ದಾವಣಗೆರೆ, ಏ. 15 – ಬಿಜೆಪಿ ಸರ್ಕಾರದ ಆಡಳಿತದಲ್ಲಿ 40% ಕಮೀಷನ್ ಭ್ರಷ್ಟಾಚಾರ ನಡೆದಿದ್ದು, ಕಾಮಗಾರಿಗಳು ದಿಕ್ಕು ತಪ್ಪಿವೆ. ಅಭಿವೃದ್ಧಿಗೆ ಮಾದರಿಯಾಗಿದ್ದ ದಾವಣಗೆರೆ ಈಗ ರಸ್ತೆ ಗುಂಡಿಗಳ ತಾಣವಾಗಿದೆ ಎಂದು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಕುಂದುವಾಡ ಕೆರೆಯ ಕಾಮಗಾರಿ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕುಂದುವಾಡ ಕೆರೆಯ ಅಭಿವೃದ್ಧಿಗೆಂದು 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಒಂದೆಡೆ ಏರಿಯ ಅಗಲ ಹೆಚ್ಚಿಸಿದ್ದರೆ ಮತ್ತೊಂದೆಡೆ ಹೂಳು ತೆಗೆದಿಲ್ಲ ಎಂದು ಆಕ್ಷೇಪಿಸಿದರು.
ಏರಿ ಅಗಲ ಹೆಚ್ಚಿಸಿದ ಕಾರಣ ಕೆರೆಯಲ್ಲಿ ಸಂಗ್ರಹಿಸುವ ನೀರಿನ ಪ್ರಮಾಣ ಕಡಿಮೆಯಾಗಲಿದೆ. ಕಾಮಗಾರಿ ವಿಳಂಬವಾಗಿ ಕೆರೆಯಲ್ಲಿ ನೀರಿಲ್ಲದೇ ಅಂತರ್ಜಲ ಕಡಿಮೆಯಾಗುತ್ತಿದೆ. ಹೀಗೇ ಆದರೆ ಜೂನ್ ವೇಳೆಗೆ ನಗರದಲ್ಲಿ ನೀರಿನ ಸಮಸ್ಯೆಯಾಗಲಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಟಿ.ವಿ. ಸ್ಟೇಷನ್ ಕೆರೆಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾಗಿ ತಿಳಿಸಿದ ಅವರು, ಇದೇ ರೀತಿ ಆವರಗೆರೆ ಕೆರೆ ಅಭಿವೃದ್ಧಿಪಡಿಸಿ, ಸಮರ್ಪಕ ನೀರಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಕುಂದುವಾಡ ಕೆರೆಯ ಕಾಮಗಾರಿ ಅರೆಬರೆ ಮಾಡಿ ನೀರಿಲ್ಲದಂತೆ ಮಾಡಲಾಗಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದಲ್ಲಿ 40% ಕಮೀಷನ್ ಇದೆ. ಕುಂದುವಾಡ ಕೆರೆಯ 15 ಕೋಟಿ ರೂ. ಕಾಮಗಾರಿಯಲ್ಲೂ ಕಮೀಷನ್ – ಜಿಎಸ್ಟಿಗೇ ಹಣ ಹೋಗಿರುವಂತೆ ಕಾಣುತ್ತಿದೆ. 15 ಕೋಟಿ ರೂ. ಬಿಡುಗಡೆಯಾಗಿದ್ದರೂ ಇಲ್ಲಿ ಹೆಚ್ಚಿನ ಕೆಲಸ ಆಗಿಲ್ಲ ಎಂದವರು ತರಾಟೆಗೆ ತೆಗೆದುಕೊಂಡರು.
ಉತ್ತರಕ್ಕೆ ಬೊಮ್ಮಾಯಿ ಏಕೆ ಮೋದಿಯೇ ಬರಲಿ
ಉತ್ತರ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಬೊಮ್ಮಾಯಿ ಏಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಬರಲಿ ಎಂದರು.
ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ನಾನೂ ಇದ್ದೇನೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನೂ ಸಹ ಆಕಾಂಕ್ಷಿಯೇ. ಎಲ್ಲರಿಗೂ ಆಸೆ ಇರುತ್ತದೆ. ಹೈಕಮಾಂಡ್ ಹಾಗೂ ಶಾಸಕರು ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದ ಮೇಲೆ ನಾವು ಯಾಕೆ ಮುಖ್ಯಮಂತ್ರಿ ಆಗಬಾರದು? ಎಂದೂ ಅವರು ಪ್ರಶ್ನಿಸಿದ್ದಾರೆ.
ಹೆಸರು ತೆಗೆಸುತ್ತೇವೆ
ನಗರದ ಹೊರ ವಲಯದಲ್ಲಿ ರಿಂಗ್ ರಸ್ತೆ ಕಾಮಗಾರಿಯಿಂದ ಸಾಕಷ್ಟು ಅನುಕೂಲವಿದೆ. ಆದರೆ, ಈಗಿನ ರಿಂಗ್ ರಸ್ತೆಯಲ್ಲಿ ಬಿಜೆಪಿಯವರ ಯಾವುದೇ ಪಾತ್ರವಿಲ್ಲ. ನನ್ನ ಅವಧಿಯಲ್ಲೇ ಕಾಮಗಾರಿ ರೂಪುಗೊಂಡಿತ್ತು ಎಂದು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಈಗ ರಿಂಗ್ ರಸ್ತೆಗೆ ಅಪ್ಪನ ಹೆಸರಿಡುತ್ತೇನೆ, ಅಜ್ಜನ ಹೆಸರಿಡುತ್ತೇನೆ ಎಂದು ಹೇಳುವುದು ಸರಿಯಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ತೆಗೆಯುತ್ತೇವೆ ಎಂದು ತಿಳಿಸಿದರು.
ಒಳ್ಳೆಯ ಗುತ್ತಿಗೆದಾರರನ್ನು ರಕ್ಷಿಸಬೇಕು
ಬಿಜೆಪಿ ಸರ್ಕಾರದಲ್ಲಿ 20-20 ಕಮೀಷನ್ ನಡೆಯುತ್ತಿದೆ. ಕಾಮಗಾರಿ ಗುತ್ತಿಗೆಗಳಲ್ಲಿ 20% ಕಮೀಷನ್ ಕೇಂದ್ರ ಹಾಗೂ 20% ರಾಜ್ಯ ಸರ್ಕಾರದ ಹಂತದಲ್ಲಿರುವವರಿಗೆ ಹೋಗುತ್ತಿದೆ ಎಂದು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ಈ ಕಮೀಷನ್ ಕಾರಣದಿಂದಾಗಿ ಒಳ್ಳೆಯ ಗುತ್ತಿಗೆದಾರರು ಕಾಮಗಾರಿಗಳಿಗೆ ಮುಂದೆ ಬರುತ್ತಿಲ್ಲ. ಇದರಿಂದಾಗಿ ವಾರದಲ್ಲಿ ಆಗುವ ಕಾಮಗಾರಿಗಳು ಮೂರು ತಿಂಗಳವರೆಗೆ ವಿಳಂಬವಾಗುತ್ತಿವೆ. ಒಳ್ಳೆಯ ಗುತ್ತಿಗೆದಾರರನ್ನು ರಕ್ಷಿಸಬೇಕು. ಇದರಲ್ಲಿ ವೈಯಕ್ತಿಕ ಹಿತಾಸಕ್ತಿಗೆ ಹೋಗಬಾರದು ಎಂದವರು ಕಿವಿಮಾತು ಹೇಳಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆ ಪಡೆಯದೇ ಸಂತೋಷ್ ಕಾಮಗಾರಿ ಕೈಗೊಂಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಯಾರ ಸೂಚನೆಯೂ ಇಲ್ಲದೇ ಇಷ್ಟೆಲ್ಲ ಕೆಲಸ ಮಾಡಲು ತಲೆ ಕೆಟ್ಟಿದೆಯಾ? ಕೆಲಸ ಆಗುವಾಗ ಏಕೆ ಸುಮ್ಮನಿದ್ದರು? ನಾಳೆ ಇನ್ನೊಬ್ಬ ಗುತ್ತಿಗೆದಾರರಿಗೆ ಈ ಕೆಲಸದ ಹಣ ಕೊಡುತ್ತಾರಾ? ಎಂದು ಪ್ರಶ್ನಿಸಿದರು.
ಅಧಿಕಾರಸ್ಥರ ಭರವಸೆಯ ಮೇಲೆ ಗುತ್ತಿಗೆದಾರರು ತುರ್ತು ಸಂದರ್ಭಗಳಲ್ಲಿ ಟೆಂಡರ್ಗೆ ಮುಂಚೆ ಕೆಲಸ ಮಾಡುವುದು ಮೊದಲಿನಿಂದಲೂ ನಡೆದಿದೆ. ಅದೇ ರೀತಿ ಸಂತೋಷ್ ಸಹ ಕೆಲಸ ಮಾಡಿರಬಹುದು ಎಂದವರು ಹೇಳಿದರು.
ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ಜಲಸಿರಿ ಯೋಜನೆಗೆ 500 ಕೋಟಿ ರೂ. ಹಾಗೂ ಯು.ಜಿ. ಕೇಬಲ್ ಅಳವಡಿಕೆಗೆ 600 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿತ್ತು. ಇನ್ನಾದರೂ ಜಲಸಿರಿ ಕಾಮಗಾರಿ ಚುರುಕು ಪಡೆದುಕೊಂಡಿಲ್ಲ. ಹರಿಹರದಲ್ಲಿ ತುಂಗಭದ್ರಾ ನದಿಗೆ ಚೆಕ್ಡ್ಯಾಂ ನಿರ್ಮಿಸುವ ಕಾಮಗಾರಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಳಂಬವಾಗಿದೆ ಎಂದರು.
ತಮ್ಮ ಅವಧಿಯಲ್ಲಿ ನಗರದಲ್ಲಿ ಉತ್ತಮ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಈ ರಸ್ತೆಗಳು ಹಾಗೂ ಅಲಂಕಾರಿಕ ಬಲ್ಬ್ಗಳನ್ನು ನೋಡಿ ಬೇರೆ ನಗರಗಳೂ ಅಳವಡಿಕೆ ಮಾಡಿಕೊಂಡಿದ್ದವು. ಆದರೆ, ಈಗ ಊರ ತುಂಬಾ ರಸ್ತೆಯಲ್ಲಿ ಗುಂಡಿಗಳಾಗಿವೆ ಎಂದವರು ತರಾಟೆಗೆ ತೆಗೆದುಕೊಂಡರು.
ಬಸ್ ನಿಲ್ದಾಣ ನವೀಕರಣ ಸೇರಿದಂತೆ, ಸ್ಮಾರ್ಟ್ ಸಿಟಿಯ ಹಲವು ಯೋಜನೆಗಳು ಅವ್ಯವಸ್ಥೆಯಾಗಿವೆ. ಹಳೆ ಊರು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಚಾಮರಾಜಪೇಟೆಯ ಕೆ.ಆರ್. ಮಾರುಕಟ್ಟೆ ಪ್ರವೇಶ ಹಾಗೂ ನಿರ್ಗಮನಕ್ಕೆ ಜಾಗ ನಿಗದಿ ಪಡಿಸದ ಕಾರಣ ಮಾರುಕಟ್ಟೆ ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಎಂ.ಸಿ.ಸಿ. ಬಿ ಬ್ಲಾಕ್ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆಂದು ಬೃಹತ್ ಜಾಗ ಮೀಸಲು ಇಡಲಾಗಿತ್ತು. ಆದರೆ, ಈ ಜಾಗವನ್ನು ಬಿಜೆಪಿ ಪಕ್ಷಕ್ಕೆ ಕೊಡಲಾಗುತ್ತಿದೆ. ನಗರ ಪಾಲಿಕೆಯ ಖಾಲಿ ಜಾಗಗಳ ದುರ್ಬಳಕೆಯಾಗುತ್ತಿದೆ ಎಂದು ಮಲ್ಲಿಕಾರ್ಜುನ್ ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯ ಎ. ನಾಗರಾಜ್, ಮುಖಂಡರಾದ ಡಿ. ಬಸವರಾಜ್, ಉಮೇಶ್, ಸುರಭಿ ಶಿವಮೂರ್ತಿ, ಪಿ.ಸಿ. ರಾಮನಾಥ್ ಮತ್ತಿತರರು ಉಪಸ್ಥಿತರಿದ್ದರು.