ಹೊನ್ನಾಳಿಯಲ್ಲಿ ಮನೆಗಳ್ಳತನ ಆರೋಪಿಗಳ ಪತ್ತೆಗೆ ತಂಡ ರಚನೆ

ಹೊನ್ನಾಳಿಯಲ್ಲಿ ಮನೆಗಳ್ಳತನ  ಆರೋಪಿಗಳ ಪತ್ತೆಗೆ ತಂಡ ರಚನೆ

ಹೊನ್ನಾಳಿ, ಫೆ.3- ಟಿಬಿ ವೃತ್ತದ ಮನೆಯೊಂದಕ್ಕೆ ಮಂಗಳವಾರ ಮೂವರು ದುಷ್ಕರ್ಮಿಗಳು ನುಗ್ಗಿ ಮನೆಯಲ್ಲಿದ್ದವರಿಗೆ ಚಾಕು ತೋರಿಸಿ ಹೆದರಿಸಿ, ಸುಮಾರು 7,65,000 ರೂ. ಮೌಲ್ಯದ 170 ಗ್ರಾಂ ಬಂಗಾರದ ಒಡವೆಗಳನ್ನು ಮತ್ತು 50,000 ರೂ.ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ವಿವರ: ಉಬಾಳೆ ಎಂಜಿನಿಯರಿಂಗ್ ವರ್ಕ್‌ಶಾಪ್ ಮಾಲೀಕರಾದ ಕಿರಣ್ ಮತ್ತು ಅಶೋಕ್ ರಾವ್ ಅವರ ಮನೆಯಲ್ಲಿ ಈ ಕೃತ್ಯ ಜರುಗಿದೆ. ಕಿರಣ್ ಮತ್ತು ಅವರ ತಂದೆ ವರ್ಕ್‌ಶಾಪ್‍ಗೆ ಹೋಗಿದ್ದು, ಕಿರಣ್ ಅವರ ಪತ್ನಿ ಸಂಜೆ ಪಟ್ಟಣದ ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಮಗಳನ್ನು ಆಟೋ ಮೂಲಕ ಮನೆಗೆ ಕರೆದುಕೊಂಡು ಬಂದ ಕೆಲಹೊತ್ತಿನಲ್ಲೇ ಏಕಾಏಕಿ ಮುಖಕ್ಕೆ ಮಾಸ್ಕ್ ಹಾಕಿದ್ದ ಮೂವರು ದುಷ್ಕರ್ಮಿಗಳು ಮಗಳನ್ನು ಹಿಡಿದುಕೊಂಡು ಚಾಕು ತೋರಿಸಿ ಹೆದರಿಸಿ, ಬೀರುವಿನಲ್ಲಿದ್ದ 50,000 ರೂ.ನಗದು ಮತ್ತು  ಆಭರಣಗಳೂ ಸೇರಿದಂತೆ ಒಟ್ಟು 8.15 ಲಕ್ಷ ರೂ.ಗಳ ಮೌಲ್ಯದ ದರೋಡೆ ನಡೆದಿದೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ಎಸ್.ಐ. ಬಸವನಗೌಡ ಬಿರಾದಾರ ದೂರು ದಾಖಲಿಸಿಕೊಂಡಿದ್ದಾರೆ.

ತನಿಖಾ ತಂಡ ರಚನೆ: ಇಂದು ಸಿಪಿಐ ಟಿ.ವಿ.ದೇವರಾಜ್ ಅವರು ಸ್ಥಳ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಮತಿ ಎಸ್.ಐ.ರಮೇಶ್ ಅವರ ನೇತೃತ್ವದಲ್ಲಿ 12 ಜನರ ತನಿಖಾ ತಂಡವನ್ನು ರಚಿಸಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಎಎಸ್‌ಐ ಹರೀಶ್, ಸಿಬ್ಬಂದಿಗಳಾದ ಜಗದೀಶ್, ಟಿ.ಸಿ.ಜಗದೀಶ್ ಉಪಸ್ಥಿತರಿದ್ದರು.