ಪ್ರಾಮಾಣಿಕ ಕಲಾವಿದರಾಗಲು ಶ್ರಮಿಸಿ : ಡಿ.ಮಹೇಂದ್ರ

ಪ್ರಾಮಾಣಿಕ ಕಲಾವಿದರಾಗಲು ಶ್ರಮಿಸಿ : ಡಿ.ಮಹೇಂದ್ರ

ದಾವಣಗೆರೆ, ಜ. 27- ಕೇವಲ ಪ್ರದರ್ಶನ, ಸ್ಪರ್ಧೆಗಾಗಿ ಮಾತ್ರ ಕಲಾಕೃತಿಗಳನ್ನು ರಚಿಸದೇ, ನಿಜವಾದ ಅರ್ಥ ದಲ್ಲಿ ಕಲಾವಿದರಾಗಬೇಕೆಂಬ ಉದ್ದೇಶದಿಂದ ಕಲಾಕೃತಿ ರಚಿಸಿ. ಪ್ರಾಮಾಣಿಕ ಕಲಾವಿದರಾಗಲು ಸತತ ಪ್ರಯತ್ನಿಸಿ ಎಂದು ದಾವಿವಿಯ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಈಚೆಗೆ ಭೇಟಿ ನೀಡಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

ಮುಂದುವರಿದು ಮಾತನಾಡಿದ ಮಹೇಂದ್ರ,  ನಿಮ್ಮೊಳಗಿನ ಸಂವೇದನೆಗಳಿಗೆ, ನಿಮ್ಮ ಸುತ್ತ ಮುತ್ತಲಿನ ಪರಿಸರದ ವಿದ್ಯಮಾನಗಳಿಗೆ ಕಲೆಯ ರೂಪ ನೀಡಲು ಹಿಂಜರಿಯಬೇಡಿ.ಯಾರನ್ನೋ ಮೆಚ್ಚಿಸಲು ಕಲಾಕೃತಿಗಳನ್ನು ರಚಿಸದೆ,ನಿಮ್ಮ ಅಂತರಂಗ ಮೆಚ್ಚುವ ಕೃತಿ ಗಳನ್ನು ರಚಿಸಿ’ಎಂದು ಕಿವಿಮಾತು ಹೇಳಿದರಲ್ಲದೆ, ಈ ದೃಶ್ಯ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಕಲಾ ಅಕಾಡೆಮಿ ಸದ್ಯದಲ್ಲಿಯೇ ಒಂದು ಉತ್ತಮ ಕಲಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂಬ ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ವತಿಯಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರನ್ನು ಶಾಲು,ದೃಶ್ಯ ಕಲಾ ಮಹಾವಿದ್ಯಾಲಯದ `ಸುವರ್ಣ’ ಸ್ಮರಣ ಸಂಚಿಕೆ ನೀಡಿ ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶಕುಮಾರ್ ಪಿ. ವಲ್ಲೇಪುರೆ ಅಭಿವಂದಿಸಿದರು. 

ದತ್ತಾತ್ರೇಯ ಭಟ್ ಸ್ವಾಗತಿಸಿ ನಿರೂಪಿಸಿದರು. ದಾ ವಿ ವಿ ಪ್ಯಾಷನ್ ಡಿಸೈನ್ ವಿಭಾಗದ ಸಂಯೋಜನಾಧಿಕಾರಿ ಡಾ. ಜೈರಾಜ್ ಚಿಕ್ಕ ಪಾಟೀಲ್ ಉಪಸ್ಥಿತರಿದ್ದರು.