ಪಟ್ಟಿಯಿಂದ ಕೈ ಬಿಟ್ಟ ಮತದಾರರು

ಪಟ್ಟಿಯಿಂದ ಕೈ ಬಿಟ್ಟ ಮತದಾರರು

ಪಾಲಿಕೆ ಮುಂದೆ ಪ್ರತಿಭಟನೆ, ತನಿಖೆಗೆ ಜಿಲ್ಲಾಧಿಕಾರಿ ನಿರ್ದೇಶನ

ದಾವಣಗೆರೆ, ಜ.25- ನಗರ ಪಾಲಿಕೆ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ವೇಳೆ ಪಾಲಿಕೆ ವ್ಯಾಪ್ತಿಯ 16ನೇ ವಾರ್ಡ್‍ನ ನಿವಾಸಿಗಳ ಮತದಾನದ ಹಕ್ಕನ್ನು ಚುನಾವಣೆ ಶಾಖೆಯ ಅಧಿಕಾರಿಗಳು ಕಸಿದುಕೊಂಡಿರುವುದಾಗಿ ಆರೋಪಿಸಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವಾರ್ಡ್‍ನಲ್ಲಿ ವಾಸವಾಗಿರುವ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣಾ ಶಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪಾಲಿಕೆ ವ್ಯಾಪ್ತಿಯ 16ನೇ ವಾರ್ಡ್‍ನಲ್ಲಿ ಕಳೆದ ಹಲವಾರು ವರ್ಷಗಳಿಂದ ಅಲ್ಲಿಯೇ ವಾಸವಿದ್ದು ಲೋಕಸಭೆ, ವಿಧಾನಸಭೆ, ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಿರುವ ನೈಜ ಮತದಾರರನ್ನು ಇತ್ತೀಚಿಗೆ ಪ್ರಕಟಗೊಂಡ ಮತದಾರರ ಪರಿಷ್ಕೃತ ಪಟ್ಟಿಯಿಂದ ಅಕ್ರಮವಾಗಿ ಕೈಬಿಡಲಾಗಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಎಂದು ಎ. ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡುವ ಮುನ್ನ ಲೋಪಗಳಿದ್ದರೇ ಮತದಾರರ ಜೊತೆ ಚರ್ಚಿಸಬೇಕಾಗಿತ್ತು. ಯಾವುದೇ ವ್ಯಕ್ತಿಯನ್ನು ಮತದಾರ ಪಟ್ಟಿಗೆ ಸೇರಿಸಲು, ಕೈ ಬಿಡಲು ಚುನಾವಣಾ ಆಯೋಗ ನಿಯಮಾವಳಿ ರೂಪಿಸಿದೆ. ಪಾಲಿಕೆಯ ಚುನಾವಣೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು, ಆಡಳಿತಾರೂಢ ಬಿಜೆಪಿ ಮುಖಂಡರ ಕೈಗೊಂಬೆಯಾಗಿ, ರಾಜಕೀಯ ದುರುದ್ಧೇಶದಿಂದ ಸಾವಿರಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಕಾನೂನು ಗಾಳಿಗೆ ತೂರಿ, ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.

ತನಿಖೆಗೆ ನಿರ್ದೇಶನ : ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಉಪ ವಿಭಾಗಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ಕೈ ಬಿಟ್ಟಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಈ ಸಂಬಂಧ ತನಿಖಾಧಿಕಾರಿಗಳು ವಿಚಾರಣೆ ನಡೆಸಿ ನೀಡುವ ವರದಿಯನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಚಮನ್ ಸಾಬ್, ಚಂದ್ರಪ್ಪ, ಗಜಾನನ ಪಾಂಡುರಂಗ ಶೆಟ್ಟಿ, ಮಂಜುನಾಥ ಆರ್. ಗೌಡ, ಆರೀಫ್‍ವುಲ್ಲಾ, ಕೆ.ಆರ್. ಚಂದ್ರಶೇಖರಪ್ಪ, ವಿ.ಆರ್. ಮಂಜುನಾಥ, ಸತೀಶ್, ಶಂಕರಮ್ಮ ಸೇರಿದಂತೆ ಇತರರು ಇದ್ದರು.