ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!

ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!

ದಾವಣಗೆರೆ, ಜ.24- ಅದು, ನಗರ-ಪಟ್ಟಣ ಅಥವಾ ಗ್ರಾಮೀಣ,  ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ  ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ  ಅಲೆದಾಡ ತೊಡಗಿದ್ದಾರೆ.  ಇದು ಒಂದು ರೀತಿ  ವೈದ್ಯಕೀಯ ತುರ್ತು ಪರಿಸ್ಥಿತಿಯ ಕರಾಳ ಛಾಯೆ  ಮೂಡಿದಂತೆ ಭಾಸವಾಗುತ್ತಿದೆ.

ನೀವು ಯಾರನ್ನು ಕೇಳಿದರೂ ಅವರಿಂದ ಬರುವ ಪ್ರತಿಕ್ರಿಯೆ, ನನಗೆ ಹುಷಾರಿರಲಿಲ್ಲ ಕೆಮ್ಮು, ಮೈಕೈ ನೋವು, ಶೀತ, ಚಳಿ-ಜ್ವರ…! ಎನ್ನುವ ಸಿದ್ಧ ಉತ್ತರ. 

ಕಳೆದ ಋತುವಿನಲ್ಲಿ ಎಲ್ಲ ಕಾಲಗಳೂ ಅತೀ ಎನಿಸುವಷ್ಟು ಫಲ ನೀಡಿದವು. ಪ್ರಕೃತಿಯ ಆ ಮುನಿಸಿನಿಂದ ಅತಿ ಬಿಸಿಲು, ಮಳೆ, ಚಳಿಯ ಅನುಭವ,  ವಾತಾವರಣ  ಕಾಣುವಂತಾಯಿತು. 

ಈ ವರ್ಷಾರಂಭದ ಮಕರ ಸಂಕ್ರಾಂತಿ ನಂತರದ ದಿನಗಳೂ ಆ ಹವಾಮಾನ ವೈಪ ರೀತ್ಯ ದಿಂದಾಗಿಯೋ ಅಥವಾ  ಕೊರೊನಾ ಪ್ರಭಾವದಿಂದಲೋ ಶೀತ ಸಂಬಂಧಿ ವ್ಯಾಧಿಗಳು ವ್ಯಾಪಕವಾಗಿ ಹರಡಿ ಜನರ  ಆರೋಗ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿಬಿಟ್ಟಿವೆ. 

ಸುಖದ ನೋವು ಅಂತಾರಲ್ಲ  ಹಾಗೇ… ಇದು ಇರಬಹುದೇನೋ  ಅನ್ನಿಸುತ್ತದೆ, ಸುಖಾ-ಸುಮ್ಮನೇ ಸಾವಿರಾರು ರೂಪಾಯಿ ಗಳನ್ನು ವೈದ್ಯರು ಮತ್ತು ಔಷಧಿಗಳಿಗಾಗಿಯೇ ಖರ್ಚು ಮಾಡಬೇಕಾಗಿ ಬಂದಿದೆ. ಜೊತೆಗೆ ಆತಂಕ, ಭಯ, ಹಿಂಸೆ, ನೋವನ್ನೂ ಸಹ ಅನುಭವಿಸಬೇಕಾಯಿತು ಎಂಬುದು ಬಹ ಳಷ್ಟು ಜನರ ನೊಂದ ನೋವಿನ ಮಾತು. ದೇಶ, ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮೂರನೇ ಅಲೆಯ ಕೊರೊನಾ ಹಾವಳಿ ಮಿತಿ ಮೀರಿದೆ, ಜೊತೆಗೆ ಓಮಿಕ್ರಾನ್  ತಳಿಗಳ   ಬೆಳವಣಿಗೆ ಸಹ ನೆಮ್ಮದಿ ಕೆಡಿಸುತ್ತಿವೆ.  

ಹೀಗಾಗಿ ಆಸ್ಪತ್ರೆಗಳು ಕೇಸುಗಳಿಂದ ಭರ್ತಿಯಾಗತೊಡಗಿವೆ.  ಮತ್ತೆ ಆಕ್ಸಿಜನ್‌ಗೆ `ಬೆಲೆ’ ಬರಬಹುದೇನೋ  ಎಂಬ ಆಶಯ-ಆತಂಕವಿದ್ದರೂ, ದೇವರ ದಯೆಯಿಂದ ಕೊರೊನಾ 2ನೇ ಅಲೆಯ ರೋಗದಷ್ಟು ಮಾರಕವೆನಿಸಿಲ್ಲ ಎಂಬುದೇ ತುಸು ನೆಮ್ಮದಿಯ ಸಂಗತಿ.

ಇನ್ನು ಶೀತ, ಕೆಮ್ಮು ಅಂತಾ ಆಸ್ಪತ್ರೆಗೆ ಹೋದವರಿಗೆ  ಚಿಕಿತ್ಸೆ ಲಭ್ಯವಾಗುತ್ತಿದೆ. ಕೊರೊನಾ ಟೆಸ್ಟ್ ಕಡ್ದಾಯವೂ ಅಲ್ಲ. ಹಾಗಾಗಿ ಜನರೂ ತುಸು ನೆಮ್ಮದಿಯಿಂದಿದ್ದಾರೆ. ಅಲ್ಲದೇ, ವೈದ್ಯರ ಬಳಿ ಆತಂಕವಿಲ್ಲದೇ ಹೋಗಿ ಅವರು ಸೂಚಿಸಿದಂತಹ  ಔಷಧಿಗಳನ್ನು ಸೇವಿಸತೊಡಗಿದ್ದಾರೆ. ಪದ್ಧತಿಯಂತೆ ಬಿಸಿ ನೀರು, ಕಷಾಯಗಳ ಮೊರೆ ಹೋಗಿದ್ದಾರೆ.   

 ವಿಶೇಷವೆಂದರೆ ಶೀತ ಬಾಧೆ, ಜ್ವರಬಾಧೆ ಮನೆಯ ಒಬ್ಬ ಸದಸ್ಯರಿಗೆ ಬಂದರೂ ಸಾಕು, ಒಂದೆರೆಡು ದಿನಗಳಲ್ಲಿ ಮನೆಮಂದಿಗೆಲ್ಲ ಸುಲಭವಾಗಿ ಹರಡುತ್ತಿದೆ. ಹಾಗೆಯೇ, ಔಷಧ ಉಪಚಾರದ ನಂತರ  ಶೀಘ್ರ ಗುಣಮುಖರಾಗುವ ಪ್ರಮಾಣ ಹೆಚ್ಚಿದೆ ಎನ್ನುವುದೇ ಸಮಾಧಾನ ತರುವ ಅಂಶ.


– ಉತ್ತಂಗಿ ಕೊಟ್ರೇಶ್,
uttangi.kotresh123@gmail.com