ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ಸಿಗರ ಆರೋಪ ಆರೋಗ್ಯಕರವಲ್ಲ

ದಾವಣಗೆರೆ, ಜ.25- ಸಂಸದರು ಕಣ್ಣಿಗೆ ಕಾಣುವಂತಹ ಒಂದೂ ಅಭಿವೃದ್ಧಿ ಮಾಡಿಲ್ಲವೆಂಬ ಕಾಂಗ್ರೆಸ್ ನಾಯಕರ ಆರೋಪ ಆರೋಗ್ಯಕರವಲ್ಲ. ಇದಕ್ಕೆ ಜನರೇ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ತಿರುಗೇಟು ನೀಡಿದ್ದಾರೆ.

ಸ್ಮಾರ್ಟ್ ಸಿಟಿ, ಅಮೃತ್ ಸಿಟಿ, ರೈಲ್ವೆ ಕಾಮಗಾರಿ, ಹೆದ್ದಾರಿ ಕಾಮಗಾರಿ ಹೀಗೆ ಕೇಂದ್ರ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು, ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಹೀಗೆ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಸಂಸದರ ಬಗ್ಗೆ ಅಧಿಕಾರ ದಾಹದಿಂದ ಅಗ್ಗದ ಪ್ರಚಾರಕ್ಕಾಗಿ ಕಾಂಗ್ರೆಸ್ಸಿಗರು ವಿನಾಕಾರಣ ಸುಳ್ಳು ಆರೋಪ ಮಾಡುತ್ತಿರುವುದು ಅಸಂಬಂಧವಾದದ್ದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದ್ದು, ವಿಮಾನ ನಿಲ್ದಾಣ ಕೂಡ ಸಾಕಾರವಾಗಲಿದೆ. ಅಶೋಕ ರೈಲ್ವೆ ಗೇಟ್ ಸಮಸ್ಯೆಯೂ ಬಗೆಹರಿಯಲಿದೆ. ಚುನಾವಣೆ ಪ್ರಚಾರಕ್ಕೆ ಬಂದಾಗ ನರೇಂದ್ರ ಮೋದಿ ಅವರು ನೀಡಿದ್ದ ಆಶ್ವಾಸನೆಯಂತೆ ಬಿಜೆಪಿ ಗೆಲ್ಲಿಸಿದ ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದನ್ನೂ ತಮ್ಮದೆನ್ನುವ ಕಾಂಗ್ರೆಸ್ ಹೇಳಿಕೆ ಬಾಲಿಶವಾದದ್ದು. ಮುಂದೊಂದು ದಿನ ಅಯೋಧ್ಯೆ ರಾಮಮಂದಿರ ನಿರ್ಮಾಣವೂ ತಮ್ಮ ಸಾಧನೆ ಎನ್ನಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್‌, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮುಖಂಡ ರಾದ ಮಂಜಾನಾಯ್ಕ, ಡಿ.ಎಸ್. ಶಿವಶಂಕರ್, ಹೆಚ್.ಪಿ. ವಿಶ್ವಾಸ್ ಇದ್ದರು.