ಶಾಲಾ ಕಟ್ಟಡದ ಕಳಪೆ ಕಾಮಗಾರಿ ನಿಲ್ಲಿಸಲು ಆಗ್ರಹ

ಶಾಲಾ ಕಟ್ಟಡದ ಕಳಪೆ ಕಾಮಗಾರಿ ನಿಲ್ಲಿಸಲು ಆಗ್ರಹ

ಹರಪನಹಳ್ಳಿ ತಾಲ್ಲೂಕಿನ ಶೃಂಗಾರತೋಟ ಗ್ರಾಮಸ್ಥರ ಪ್ರತಿಭಟನೆ

ಹರಪನಹಳ್ಳಿ, ಜ.18- ಶಾಲಾ ಕಟ್ಟಡದ ಕಳಪೆ ಕಾಮಗಾರಿ ತಡೆಯುವಂತೆ ಆಗ್ರಹಿಸಿ ರಾಜ್ಯ ಕಾರ್ಮಿಕರ ಪರಿಷತ್ ನೇತೃತ್ವದಲ್ಲಿ ತಾಲ್ಲೂಕಿನ ಶೃಂಗಾರತೋಟ ಗ್ರಾಮಸ್ಥರು ತಾಲ್ಲೂಕು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

 ಈ ವೇಳೆ ರಾಜ್ಯ ಕಾರ್ಮಿಕ ಪರಿಷತ್ ಸದಸ್ಯರಾದ ಗುಡದಪ್ಪ ಮಾತನಾಡಿ, ಗ್ರಾಮದ ಹತ್ತಿರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಪಡೆದಿದ್ದು, ಬಾಗಳಿ ರಸ್ತೆಗೆ ಹೋಗುವ ಖಾಲಿ ಜೌಗು ಪ್ರದೇಶದಲ್ಲಿ ಕೊಠಡಿಗಳನ್ನು ಕೆಆರ್‍ಐಡಿಎಲ್‍ನಿಂದ ಆರಂಭಿಸಿದ್ದಾರೆ. 

ಇಟ್ಟಿಗೆ, ಕಾಡುಗಲ್ಲುಗಳನ್ನು ಬಳಸಿದ್ದಾರೆ. ಈಗಾಗಲೇ ತಳಪಾಯ ನೀರಿನಾಂಶ ಹೆಚ್ಚಾಗಿರುವ ಕಾರಣ ಇಟ್ಟಿಗೆ ಮತ್ತು ಕಾಡುಗಲ್ಲುಗಳು ಗಟ್ಟಿಯಾಗಿರುವುದಿಲ್ಲ, ನೆಲದಾಳಕ್ಕೆ ಕುಸಿಯುತ್ತವೆ. ಇದರಿಂದ ಗೋಡೆ ಕುಸಿಯುವ ಸಾಧ್ಯತೆ ಇರುತ್ತದೆ. ಶಾಲಾ ಮಕ್ಕಳ ಹಿತದೃಷ್ಠಿಯಿಂದ ಗುತ್ತಿಗೆ ಪಡೆದಿರುವ ಅಧಿಕಾರಿಗಳು ಮರು ಕ್ರಿಯಾ ಯೋಜನೆ ತಯಾರಿಸಿ, ಸದರಿ ಜಾಗದಲ್ಲಿ ಗುಣಮಟ್ಟದ ಸಾಮಗ್ರಿಗಳೊಂದಿಗೆ ಕಾಮಗಾರಿ ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಕಾಂತರಾಜ, ರೇಖಾ, ಎ.ಸವಿತಾ, ಗ್ರಾಮಸ್ಥರಾದ ಎಂ.ಮಂಜುನಾಥ, ಸುರೇಶ್, ಹಾಲಪ್ಪ, ಸುರೇಶ್, ಹನುಮಂತಪ್ಪ, ರಮೇಶ್, ಮರಿಯಪ್ಪ, ಹಾಲಪ್ಪ, ದುರುಗಪ್ಪ, ಕೆ.ರಹಮತ್, ಸೇರಿದಂತೆ ಇತರರು ಇದ್ದರು.