ಭರಮಸಾಗರ – ಜಗಳೂರು ಏತ ನೀರಾವರಿ ಯೋಜನೆಗಳು ಅವಳಿ-ಜವಳಿ ಮಕ್ಕಳಿದ್ದಂತೆ

ಭರಮಸಾಗರ – ಜಗಳೂರು ಏತ ನೀರಾವರಿ ಯೋಜನೆಗಳು ಅವಳಿ-ಜವಳಿ ಮಕ್ಕಳಿದ್ದಂತೆ

ಭರಮಸಾಗರ, ಜ.17- ಇಲ್ಲಿಯ ಬಿಚ್ಚುಗತ್ತಿ ಭರಮಣ್ಣ ನಾಯಕನ ಕೆರೆ ಕೋಡಿ ಬಿದ್ದ ನೀರು ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆ ತಲುಪಿದೆ. ಹರಿವ ನೀರು ನೋಡಿ ಜನರ ಮುಖದಲ್ಲಿ ಸಂತೋಷದ ಕೋಡಿಯೇ ಹರಿಯುತ್ತಿದೆ. ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ಅವಳಿ-ಜವಳಿ ಮಕ್ಕಳಿದ್ದಂತೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಬಣ್ಣಿಸಿದರು. 

ಭರಮಸಾಗರದ ದೊಡ್ಡಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಪ್ರಸ್ತಾಪ ಮಾಡಿದಾಗ ಬಜೆಟ್‌ನಲ್ಲಿ 500 ಕೋಟಿ ಹಣವನ್ನು ಮೀಸಲಿಟ್ಟರು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ನೀರಾವರಿ ನಿಗಮದ ಅಡಿ ಈ ಯೋಜನೆಯನ್ನು ಆದ್ಯತೆಯ ಮೇಲೆ ಅಂಗೀಕರಿಸಿದರು. ನಂತರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆರ್ಥಿಕ ಸಹಕಾರದಿಂದ ಜಗಳೂರು ಮತ್ತು ಭರಮಸಾಗರ ಜೋಡಿ ಏತ ನೀರಾವರಿ ಯೋಜನೆ ಸಫಲವಾಯಿತು. 

ರೈತರು ಎಂದಿಗೂ ಸೋಮಾರಿಗಳಲ್ಲ. ರೈತರಿಗೆ ನೀರು ಕೊಟ್ಟರೆ ಸರ್ಕಾರದ ಸಾಲವನ್ನು ತೀರಿಸುವಷ್ಟು ಸಾಮರ್ಥ್ಯವಿದೆ ಎಂದು ತರಳಬಾಳು ಶ್ರೀಗಳು ಹೆಮ್ಮೆಯಿಂದ ಹೇಳಿದರು. 

ಜಗಳೂರು ಏತ ನೀರಾವರಿ ಯೋಜನೆ ಇಷ್ಟೊತ್ತಿಗಾಗಲೇ ಯಶಸ್ವಿಯಾಗಿ ಮುಗಿಯಬೇಕಿತ್ತು. ಆದರೆ, ಕಕ್ಕರಗೊಳ್ಳ ಸಮೀಪ 800  ಮೀಟರ್ ಪೈಪ್ ಅಳವಡಿಸಲು ಕೆಲ ರೈತರು ಅಡ್ಡಿಪಡಿಸಿ, 6 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ಮನುಷ್ಯರ ಸ್ವಾರ್ಥಕ್ಕೆ ಕೊನೆಯೇ ಇಲ್ಲವಾಗಿದೆ. ಒಂದು ವೇಳೆ ಬಿಚ್ಚುಗತ್ತಿ ಭರಮಣ್ಣ ನಾಯಕರು ಕೆರೆ ಕಟ್ಟಿಸದಿದ್ದರೆ ನಾವು ನೀರು ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಅವರನ್ನು ಎಷ್ಟು ನೆನೆಸಿದರೂ ಸಾಲದು ಎಂದರು. 

ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಭರಮಸಾಗರ ಜಗಳೂರು ಏತ ನೀರಾವರಿ ಯೋಜನೆ ಯಶಸ್ವಿಯಾಗಿದೆ. ಇದಕ್ಕೆ ಶ್ರೀಗಳ ಸಂಕಲ್ಪ ಕಾರಣ. ರಾಜಕಾರಣಿಗಳ ಸೇವೆ ಅಳಿಲು ಸೇವೆ ಮಾತ್ರ. ಎರಡು ಯೋಜನೆಗಳು ಎಂಬ ಮಕ್ಕಳನ್ನು ಕರುಣಿಸಿರುವ ಶ್ರೀಗಳಿಗೆ ಆಭಾರಿಯಾಗಿರುತ್ತೇವೆ ಎಂದರು. 

ಜಿ.ಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಿರ ಅಡಿ ಕೊರೆಸಿದರೂ ನೀರು ಬರದ ಜಮೀನಿನಲ್ಲಿ ಪ್ರಸ್ತುತ 80 ಅಡಿಗೆ ನೀರು ಬರುತ್ತಿದ್ದು, ಇದಕ್ಕೆ
ಕೆರೆ ತುಂಬಿರುವುದೇ ಕಾರಣ. ಈ ಭಾಗದ
ಜನ ವಲಸೆ ಹೋಗುವುದನ್ನು ನಿಲ್ಲಿಸಿ, ಕೃಷಿಯ ಕಡೆ ಹೆಚ್ಚು ಗಮನಹರಿಸಲಿದ್ದಾರೆ. ಯಾವ ರಾಜಕಾರಣಿಗಳೂ ಮಾಡದ ಕೆಲಸವನ್ನು ಶ್ರೀಗಳು ಮಾಡಿದ್ದಾರೆ ಎಂದು ಹೇಳಿದರು. 

ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಶಶಿಪಾಟೀಲ್, ವೀಣಾ ಶಿವಯೋಗಿ, ಚಿಕ್ಕಬೆನ್ನೂರು ತೀರ್ಥಪ್ಪ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಡಿ.ಎಸ್.ಪ್ರವೀಣ್‌ಕುಮಾರ್, ಬಣಜಿಗ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ, ಟಿ.ಆರ್.ಚನ್ನೇಶ್, ಕೋಡಿರಂಗವ್ವನಹಳ್ಳಿ ಹನುಮಂತಪ್ಪ, ಮಾಜಿ ತಾ.ಪಂ. ಸದಸ್ಯ ಕಲ್ಲೇಶ್, ಕೋಗುಂಡೆ ಮಂಜುನಾಥಪ್ಪ, ಶೈಲೇಶ್ ಕುಮಾರ್, ವೀರೇಶ್, ಶ್ರೀಧರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಭರಮಸಾಗರ ಗ್ರಾಮಸ್ಥರು ಶ್ರೀಗಳವರಿಗೆ ಶಾಲು ಹೊದಿಸಿ, ಕಾಣಿಕೆ ನೀಡಿ ಗೌರವ ಸಮರ್ಪಣೆ ಮಾಡಿದರು. ಬಿ.ಟಿ. ನಿರಂಜನ ಮೂರ್ತಿ ಸ್ವಾಗತಿಸಿದರು.