ಕಲಿಕೆಗೆ ಸುಸ್ಥಿರ ನೀತಿಯಿಲ್ಲದೇ ಶಿಕ್ಷಣಕ್ಕೆ ಕಂಟಕ

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಕಳವಳ

ದಾವಣಗೆರೆ, ಜ. 17 – ಕೊರೊನಾ ಸಮಯದಲ್ಲಿ ಸುಸ್ಥಿರ ಹಾಗೂ ನಿರಂತರ ಕಲಿಕೆಗಾಗಿ ಸರ್ಕಾರ ನೀತಿಗಳನ್ನು ರೂಪಿಸದ ಕಾರಣದಿಂದಾಗಿ ಮಕ್ಕಳ ಕಲಿಕೆಗೇ ಕಂಟಕವಾಗಿದೆ ಎಂದು ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಶಾಲಾ ಶುಲ್ಕ, ಅನುಮತಿ ನವೀಕರಣದಿಂದ ಹಿಡಿದು ಕಲಿಕೆ, ಪರೀಕ್ಷೆ ಕೊನೆಗೆ ಟಿ.ಸಿ.ವರೆಗೂ ಸ್ಪಷ್ಟ ನೀತಿಗಳಿಲ್ಲದೇ ಶಾಲಾ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ. ಇಷ್ಟಾದರೂ ಸರ್ಕಾರ ನಿರಂತರ ಕಲಿಕೆಗೆ ಆದ್ಯತೆ ನೀಡುವ ಬದಲು, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸಲ್ಲದ ನಿಯಮಗಳನ್ನು ಹೇರುವತ್ತಲೇ ಗಮನ ಹರಿಸುತ್ತಿದೆ ಒಕ್ಕೂಟ ವಿಷಾದ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಒಕ್ಕೂಟದ ನಿರ್ದೇಶಕ ಹೆಚ್. ಜಯಣ್ಣ, ಸರ್ಕಾರದ ನೀತಿ ಖಾಸಗಿ ಶಾಲೆಗಳನ್ನು ಹತ್ತಿಕ್ಕಲು ಪ್ರಯತ್ನ ಮಾಡಿದಂತಿದೆ. ಅಗ್ನಿಶಾಮಕ ದಳದ ಎನ್.ಒ.ಸಿ. ನಿಯಮ ಸರ್ಕಾರಿ ಶಾಲೆ ಗಳಿಗೆ ಅನ್ವಯಿಸದೇ ಕೇವಲ ಖಾಸಗಿಯವರಿಗೆ ಅನ್ವಯಿಸಲಾಗುತ್ತಿದೆ. ಟಿ.ಸಿ. ವಿಷಯದಲ್ಲೂ ಅಸ್ಪಷ್ಟ ನಿಲುವು ತಳೆದಿದೆ ಎಂದಿದ್ದಾರೆ.

ಕೊರೊನಾ ಸಮಯದಲ್ಲಿ ಶೇ.70ರಷ್ಟೂ ಶುಲ್ಕ ಪಾವತಿಯಾಗಿಲ್ಲ. ಆದರೂ ಯಾವ ಮಕ್ಕಳನ್ನೂ ಖಾಸಗಿ ಶಾಲೆಯವರು ಹೊರ ಹಾಕಿಲ್ಲ. ಶಾಲೆಗಳು ಆರ್ಥಿಕವಾಗಿ ಕುಸಿದರೆ ಶಿಕ್ಷಕರು ಬೀದಿ ಪಾಲಾಗುತ್ತಾರೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಶುಲ್ಕದ ವಿಷಯದಲ್ಲಿ ಪೋಷಕರಿಗೆ ತಪ್ಪು ಮಾಹಿತಿ ನೀಡಬಾರದು ಎಂದವರು ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಿಷ್ಟೇ ಸೌಲಭ್ಯ ಇರಬೇಕು ಎಂದು ಸರ್ಕಾರ ಕಾನೂನು ಚಾಟಿ ಬೀಸುವ ಬದಲು, ಅಂತಹ ಸೌಲಭ್ಯಗಳನ್ನು ಹೊಂದಲು ನೆರವು ನೀಡಬೇಕು. ನವೋದ್ಯಮಗಳಿಗೆ ನೀಡುವ ಸಹಕಾರವನ್ನೇ ಖಾಸಗಿ ಶಾಲೆಗಳಿಗೂ ನೀಡಬೇಕು. ಸರ್ಕಾರ ಹಾಗೂ ಖಾಸಗಿಯವರು ಜೊತೆಯಾಗಿ ಸಾಗಿದರೆ ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.

ಒಕ್ಕೂಟದ ನಿರ್ದೇಶಕರಾದ ಸಹನಾ ರವಿ ಮಾತನಾಡಿ, ಸರ್ಕಾರದ ಅಸ್ಪಷ್ಟ ನೀತಿಯಿಂದಾಗಿ ಪೋಷಕರು ಗೊಂದಲಕ್ಕೆ ಸಿಲುಕಿ, ಶುಲ್ಕ ಪಾವತಿಸುತ್ತಿಲ್ಲ. ಶುಲ್ಕವೇ ಬರದ ಸಂದರ್ಭದಲ್ಲಿ ಎನ್.ಒ.ಸಿ. ಪಡೆಯುವ ಸಲುವಾಗಿ ಹೊಸ ಕಟ್ಟಡ ಕಟ್ಟಲು ಸಾಧ್ಯವೇ? ಸಾಕಷ್ಟು ಸರ್ಕಾರಿ ಶಾಲೆಗಳು ಕುಸಿಯುವ ಹಂತದಲ್ಲಿವೆ. ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಹತ್ತನೇ ತರಗತಿ ಪರೀಕ್ಷೆಗೆ ಇನ್ನೆರಡು ತಿಂಗಳು ಮಾತ್ರ ಉಳಿದಿದೆ. ಈ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚುವ ಬದಲು, ಕಲಿಕೆಗೆ ಸರಿಯಾದ ಮಾರ್ಗದರ್ಶನ ಬೇಕಿದೆ. ಮಾಲ್, ದೇವಸ್ಥಾನ ಎಲ್ಲವನ್ನೂ ತೆರೆದಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದವರು ಅಭಿಪ್ರಾಯ ಪಟ್ಟರು.

ಶೇ.90ಕ್ಕೂ ಹೆಚ್ಚು ಪೋಷಕರು ನೇರ ಶಿಕ್ಷಣದ ಪರವಾಗಿದ್ದಾರೆ. ಪರೀಕ್ಷೆ ಇಲ್ಲದೇ ಪಾಸ್ ಮಾಡುತ್ತಾರೆ ಎಂಬ ಭಾವನೆಯಿಂದ ಮಕ್ಕಳು ಕಲಿಕೆಯಿಂದ ದೂರವಾಗುತ್ತಿದ್ದಾರೆ. ಇದು ಮಕ್ಕಳನ್ನು ಅನೈತಿಕತೆಗೆ ತಳ್ಳಿದಂತೆ ಎಂದು ಒಕ್ಕೂಟದ ನಿರ್ದೇಶಕ ಬಿ. ಶಶಿಧರ್ ಹೇಳಿದ್ದಾರೆ.

ಖಜಾಂಚಿ ವಿಜಯ್ ರಾಜ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸಾಲದ ಕಂತುಗಳನ್ನು ಎರಡು ವರ್ಷಗಳವರೆಗೆ ತಡೆಯಬಹುದು ಎಂದು ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ. ಇಷ್ಟಾದರೂ, ಖಾಸಗಿ ಶಾಲೆಗಳ ಸಾಲದ ವಸೂಲಿಗೆ ಬ್ಯಾಂಕುಗಳು ಇಚ್ಛಾನುಸಾರ ನೋಟಿಸ್ ಕಳಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.