ಸಾಹಿತಿಯನ್ನಾಗಿಸಿದ ಲಾಕ್‌ಡೌನ್ : ಹೆಚ್.ಎನ್. ಶಿವಕುಮಾರ್ ಚೊಚ್ಚಲ ಕೃತಿ ಬಿಡುಗಡೆ

ಸಾಹಿತಿಯನ್ನಾಗಿಸಿದ ಲಾಕ್‌ಡೌನ್ : ಹೆಚ್.ಎನ್. ಶಿವಕುಮಾರ್ ಚೊಚ್ಚಲ ಕೃತಿ ಬಿಡುಗಡೆ

ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೂರಾರು ಕಾರ್ಯಕ್ರಮಗಳಲ್ಲಿ ಕೊಡುಗೆಯಾಗಿ ಬಂದ ಅನೇಕ ಪುಸ್ತಕಗಳು ಮನೆಯಲ್ಲಿ ಸಂಗ್ರಹವಾಗಿದ್ದವು. ಕೊರೊನಾ ಹಿನ್ನೆಲೆಯಲ್ಲಿ ಆಗಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಆ ಪುಸ್ತಕಗಳನ್ನು ಒಂದೊಂದಾಗಿ ಓದುತ್ತಾ ಹೋದಂತೆ ಒಂದೊಂದು ಕವಿತೆ – ಲೇಖನಗಳು ಖುಷಿ ಕೊಡುತ್ತಿದ್ದವು. ಇದರಿಂದ ನಾನೂ ಏಕೆ ಲೇಖನ – ಕವಿತೆಗಳನ್ನು ಬರೆಯಬಾರದು ? ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಯಿತು. ಈ ಹಿನ್ನೆಲೆಯಲ್ಲಿ ಕವನಗಳನ್ನು ಬರೆದು ನನ್ನ ಆತ್ಮೀಯ ಒಡನಾಡಿಗಳಾಗಿದ್ದ ಸಾಹಿತಿಗಳಿಗೆ ವಾಟ್ಸಪ್ ಮೂಲಕ ಕಳುಹಿಸಿದಾಗ, ಮೆಚ್ಚುಗೆಗಳು ವ್ಯಕ್ತವಾದವು. ಅದರಿಂದ ಬರೆಯುವ ಅಭ್ಯಾಸವನ್ನು ಹೆಚ್ಚಿಸಿಕೊಂಡೆ. ರಚಿಸಿದ ಕವನಗಳ ಸಂಗ್ರಹವೇ ಇದೀಗ ಪುಸ್ತಕವಾಗಿ ರೂಪುಗೊಂಡಿದೆ.

-ಹೆಚ್.ಎನ್. ಶಿವಕುಮಾರ್

ದಾವಣಗೆರೆ, ಜ. 16- ಇಂಜಿನಿಯರಿಂಗ್ ಪದವೀಧರರಾಗಿರುವ ಹೆಚ್.ಎನ್. ಶಿವಕುಮಾರ್ ಅವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದು, ಪ್ರವೃತ್ತಿಯನ್ನಾಗಿಸಿಕೊಂಡು ರಚಿಸಿದ ಕವನಗಳ ಸಂಗ್ರಹ `ಮುಂಗಾರು’ ಕವನ ಸಂಕಲನ ಸಾಹಿತ್ಯ ಲೋಕಕ್ಕೆ ಸಮರ್ಪಿತಗೊಂಡಿದೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ವಿಶ್ರಾಂತ ಪ್ರಾಂಶುಪಾಲರಾಗಿರುವ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ ಅವರು `ಮುಂಗಾರು’ ಸಂಕಲನವನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ಭಿಕ್ಷಾವರ್ತಿ ಮಠ, ಸಾಹಿತ್ಯ ರಚನೆಗೆ ಕೈಹಾಕಿ ಕೇವಲ ಒಂದೂವರೆ ವರ್ಷದಲ್ಲಿ ಈ ಕ್ಷೇತ್ರಕ್ಕೆ ತಮ್ಮ ಚೊಚ್ಚಲ ಕವನ ಸಂಕಲನ ಕೊಟ್ಟಿರುವ ಹೆಚ್.ಎನ್. ಶಿವಕುಮಾರ್ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರ ಹೊಮ್ಮಲಿ ಎಂದು ಹಾರೈಸಿದರು.

`ಮುಂಗಾರು’ ಕವನ ಸಂಕಲನ ಕುರಿತಂತೆ ಮಾತನಾಡಿದ ಶ್ರೀ ರಾಘವೇಂದ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಹನುಮಲಿ ಅವರು, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹೆಚ್.ಎನ್.  ಶಿವಕುಮಾರ್, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು, ಇದೀಗ ಅವರ ಕವನ ಸಂಕಲನ ಬಿಡುಗಡೆಯಾಗುವುದರ ಮೂಲಕ ಅವರಲ್ಲಿರುವ ಬಹುಮುಖ ಪ್ರತಿಭೆ ಅನಾವರಣಗೊಂಡಿದೆ ಎಂದು ಶ್ಲ್ಯಾಘಿಸಿದರು.

ಕವಿತೆ ಎಂದರೆ ಮನದಾಳದ ನೋವು, ನಲಿವಿಗೆ ಕೈ ಹಿಡಿಯುವ ಸಂಗಾತಿ. ಸಂತೋಷ – ಸಂಕಟ ಎರಡನ್ನೂ ಹೊರ ಹೊಮ್ಮಿಸಲು ಇರುವ ಶ್ವೇತಪತ್ರ. ಅವ್ಯವಸ್ಥೆಯನ್ನು ಕಂಡು ಪ್ರತಿಭಟನೆ ತೋರಿಸುವ ಜೊತೆಗಾರ. ಹೃದಯದ ಭಾವನೆಗಳನ್ನು ಮತ್ತೊಬ್ಬ ರೊಂದಿಗೆ ಹಂಚಿಕೊಳ್ಳುವ ಅಕ್ಷರ ದೋಣಿ ಎಂದು ಬಸವರಾಜ್ ಹನುಮಲಿ ಅವರು ಕವನ ರಚನೆ ಕುರಿತಂತೆ ಮಾರ್ಮಿಕವಾಗಿ ವಿಶ್ಲೇಷಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ತಮ್ಮಲ್ಲಿ ಪ್ರವೃತ್ತಿಯನ್ನಾಗಿಸಿ ಕೊಂಡಿದ್ದ ಬರವಣಿಗೆಯಲ್ಲಿ ಇನ್ನೂ ಹೆಚ್ಚಾಗಿ ತೊಡಗಿಸಿಕೊಳ್ಳುವುದರೊಂದಿಗೆ ಹೆಚ್.ಎನ್. ಶಿವಕುಮಾರ್ ಅವರು ಕನ್ನಡ ಸಾಹಿತ್ಯ ಸೇವೆಯಲ್ಲಿ ನಕ್ಷತ್ರದಂತೆ ಮಿನುಗುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಮಾತನಾಡಿ, ಹೆಚ್.ಎನ್. ಶಿವಕುಮಾರ್ ಅವರ ಸಂಕಲನ ಎಲ್ಲರ ಮನ ತಲುಪಲಿ, ಆ ಮೂಲಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಮತ್ತೋರ್ವ ಅತಿಥಿಯಾಗಿದ್ದ `ಜನತಾವಾಣಿ’ ಉಪ ಸಂಪಾದಕ ಇ.ಎಂ. ಮಂಜುನಾಥ್ ಮಾತನಾಡಿ, ಇತರೆ ಕ್ಷೇತ್ರಗಳಿಗಿಂತ ಭಿನ್ನವಾಗಿರುವ ಸಾಹಿತ್ಯ ಕ್ಷೇತ್ರವು, ಜ್ಞಾನ – ವಿದ್ವತ್ ಇದ್ದಷ್ಟು ಅಪ್ಪಿಕೊಳ್ಳುವಂತದ್ದು. ಇಂತಹ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ಹೆಚ್.ಎನ್. ಶಿವಕುಮಾರ್ ಅವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಪ್ರತಿಭಾನ್ವಿತರಾಗಿದ್ದು, ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಮೌಲ್ಯ ತಂದುಕೊಡು ವಂತಹ ಕೆಲಸವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕರೂ ಆಗಿರುವ ಗಾಯಕ ಬಿ.ಟಿ. ಪ್ರಕಾಶ್ ಮಾತನಾಡಿ, ತನ್ನ ಆತ್ಮೀಯ ಒಡನಾಡಿ ಹೆಚ್.ಎನ್. ಶಿವಕುಮಾರ್ ಅವರ ಲೇಖನ, ಕವಿತೆ ಗಳು ಇನ್ನೂ ಗಟ್ಟಿಗೊಳ್ಳುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮತ್ತು ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಾಡಾಗಿತ್ತು.

ಬಹುಮುಖ ಪ್ರತಿಭೆ :  ಹೊಸದುರ್ಗ ತಾಲ್ಲೂಕಿನ ದೇವಪುರ ಗ್ರಾಮದವರಾದ, ಸಹಕಾರ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ದಿ. ಹೆಚ್.ಎಸ್. ನಾಗೇಂದ್ರಪ್ಪ ಮತ್ತು ಶ್ರೀಮತಿ ಸುಮಂಗಲ ದಂಪತಿ ದ್ವಿತೀಯ ಪುತ್ರ ಹೆಚ್.ಎನ್. ಶಿವಕುಮಾರ್ ಸಿವಿಲ್ ಇಂಜಿನಿಯರಿಂಗ್ ಪದವೀಧರರು. 

ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಶಿವಕುಮಾರ್, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜನತಾ ಬಜಾರ್ ನಿರ್ದೇಶಕರಾಗಿ, ಆಟೋಮೊಬೈಲ್ ಸೊಸೈಟಿ ನಿರ್ದೇಶಕರಾಗಿ, ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ರಾಜಕಾರಣದಲ್ಲಿ ಗುರುತಿಸಿಕೊಂಡಿ ರುವ ಅವರು, ಪ್ರತಿಷ್ಠಿತ ಲಯನ್ಸ್ ಜಿಲ್ಲಾ 317-ಸಿ ರಾಜ್ಯಪಾಲರಾಗಿ ಕೆಲಸ ಮಾಡುವುದರ ಮೂಲಕ ಸಾಮಾಜಿಕ ಸೇವಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಇದೀಗ, ದಾವಣಗೆರೆ ಸ್ಮಾರ್ಟ್ ಸಿಟಿ ಸಲಹಾ ಮಂಡಳಿ ಸದಸ್ಯರಾಗಿದ್ದಾರೆ. 

ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಎನ್. ಶಿವಕುಮಾರ್, ಕೊರೊನಾ ಪರಿಣಾಮ ಆಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದ ಹಲವಾರು ಪುಸ್ತಕಗಳನ್ನು ಓದುವುದರ ಮೂಲಕ ತಾವೂ ಏಕೆ ಲೇಖನ – ಕವಿತೆಗಳನ್ನು ಬರೆಯಬಾರದು ? ಎಂದು ತಮ್ಮನ್ನು ಪ್ರಶ್ನಿಸಿಕೊಂಡು ಅದರಲ್ಲಿ ಮಿಂದೆದ್ದು ಹಲವಾರು ಕವಿತೆಗಳಿಂದ ರೂಪುಗೊಂಡಿರುವುದೇ `ಮುಂಗಾರು’ ಸಂಕಲನ.

ಈ ಮೂಲಕ  ತಾನು ಸಾಹಿತ್ಯ ಕ್ಷೇತ್ರಕ್ಕೆ ಬರಲು ಕಾರಣರಾದ ಆತ್ಮೀಯ ಒಡನಾಡಿಗಳಾದ ಹಿರಿಯ ಸಾಹಿತಿ ಬಸವರಾಜ ಹನುಮಲಿ, ಬಾ.ಮ. ಬಸವರಾಜಯ್ಯ, ಆರ್.ಟಿ. ಅರುಣ್‌ಕುಮಾರ್, ಬಿ.ಟಿ. ಪ್ರಕಾಶ್, ಎ.ಆರ್. ಉಜ್ಜಿನಪ್ಪ, ಬಿ. ವಾಮದೇವಪ್ಪ ಮತ್ತಿತರರು ನೀಡಿದ ಪ್ರೋತ್ಸಾಹ, ಸಹಕಾರಕ್ಕೆ ಹೆಚ್.ಎನ್. ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.