ಮಲೇಬೆನ್ನೂರು ಬೀರಲಿಂಗೇಶ್ವರ ಕಾಲೇಜಿನ 11 ವಿದ್ಯಾರ್ಥಿನಿಯರಿಗೆ ಸೋಂಕು ದೃಢ

ಮಲೇಬೆನ್ನೂರು, ಜ.16- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟ ಬೆನ್ನಿಂದೆಯೇ ಬೀರಲಿಂಗೇಶ್ವರ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ 11 ವಿದ್ಯಾರ್ಥಿನಿಯರಿಗೂ ಕೋವಿಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ.

ಸ.ಪ.ಪೂ ಕಾಲೇಜು ಮತ್ತು ಬೀರಲಿಂಗೇಶ್ವರ ಕಾಲೇಜು ಅತಿ ಸಮೀಪದಲ್ಲೇ ಇರುವುದರಿಂದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದ ದಿನವೇ ಬೀರಲಿಂಗೇಶ್ವರ ಕಾಲೇಜಿನ 57 ವಿದ್ಯಾರ್ಥಿನಿಯರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆ ಪೈಕಿ 11 ವಿದ್ಯಾರ್ಥಿನಿ ಯರಿಗೆ ಸೋಂಕು ಕಾಣಿಸಿಕೊಂಡಿದ್ದು, ಭಾನುವಾರ ಅವರೆಲ್ಲರ ಆರೋಗ್ಯ ತಪಾಸಣೆ ಮಾಡಿಸಿ, ಹೋಂ ಐಸೋಲೇಷನ್‌ಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ಕಾಲೇಜಿಗೆ ರಜೆ ನೀಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ಸರ್ಕಾರಿ ಕಾಲೇಜಿಗೆ ನೀಡಿರುವ ರಜೆಯಂತೆ ಈ ಕಾಲೇಜಿಗೂ ಒಂದು ವಾರ ರಜೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಸೋಮವಾರ ಮತ್ತೊಷ್ಟು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದೆಂದು ತಿಳಿದು ಬಂದಿದೆ. 

ಎರಡೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿರುವುದು ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಶಾಕ್ ನೀಡಿದ್ದು, ಜನ ಇನ್ನಾದರೂ ಜಾಗೃತಿ ವಹಿಸಬೇಕೆಂದು ಉಪ ತಹಶೀಲ್ದಾರ್ ಆರ್.ರವಿ ಮನವಿ ಮಾಡಿದ್ದಾರೆ.