ಇಟ್ಟಿಗೆ ಭಟ್ಟಿಯಲ್ಲಿ ಮಕ್ಕಳ ದುಡಿಮೆ

ಇಟ್ಟಿಗೆ ಭಟ್ಟಿಯಲ್ಲಿ ಮಕ್ಕಳ ದುಡಿಮೆ

ಹರಿಹರ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪೌರಾಯುಕ್ತರು

ಹರಿಹರ, ಜ.16- ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೌರಾಯುಕ್ತರಾದ ಶ್ರೀಮತಿ ಲಕ್ಷ್ಮಿ ಅವರು ಎಚ್ಚರಿಸಿದ್ದಾರೆ. 

ಇಟ್ಟಿಗೆ ಭಟ್ಟಿ ಮಾಲೀಕರು, ಕಾರ್ಮಿಕರು, ಪೋಷಕರಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕುರಿತು ಮೊನ್ನೆ ಏರ್ಪಾಡಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕಾರ್ಮಿಕ, ಕಂದಾಯ, ಸಾರ್ವಜನಿಕ ಶಿಕ್ಷಣ, ಪೊಲೀಸ್ ಇಲಾಖೆಗಳು ಹಾಗೂ ಜಿಲ್ಲಾ ಬಾಲಕಾ ರ್ಮಿಕ ಯೋಜನಾ ಸಂಸ್ಥೆ ಇವರುಗಳ ಸಂಯು ಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಹಶೀಲ್ದಾರ್ ಶಶಿಧರಯ್ಯ ಉದ್ಘಾಟಿಸಿದರು.

ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ನೇಮಕ ಮಾಡಿಕೊಂಡಲ್ಲಿ 6 ತಿಂಗಳಿ ನಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20 ಸಾವಿರದಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡಕ್ಕೂ ಒಳಗಾಗಬೇಕಾಗುತ್ತದೆ ಎಂದು ಯೋಜನಾ ನಿರ್ದೇಶಕ ಎನ್. ಪ್ರಸನ್ನ  ಎಚ್ಚರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಅವರು ಹರ್ಲಾಪುರ, ಕುರಬರಹಳ್ಳಿ, ಗುತ್ತೂರು ವ್ಯಾಪ್ತಿಯ ಶಾಲೆ ಬಿಟ್ಟ 63 ಮಕ್ಕಳನ್ನು ಶಾಲೆಗೆ ಮರು ದಾಖಲಿಸಿಕೊಂಡು ಅವರಿಗೆ ನೋಟ್ ಬುಕ್, ಶಾಲಾ ಬ್ಯಾಗ್ ಹಾಗೂ ಇತರೆ ಪಠ್ಯ ಸಾಮಗ್ರಿಗಳನ್ನು ವಿತರಿಸಿದರು.

ಶಿಶು ಅಭಿವೃದ್ದಿ ಅಧಿಕಾರಿ ನಿರ್ಮಲ, ಪಿಡಿಓ ವಿಜಯಲಕ್ಷ್ಮಿ, ಕಾರ್ಮಿಕ ನಿರೀಕ್ಷಕರಾದ ಕವಿತ ಕುಮಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಗದೀಶ್ ಉಜ್ಜಮ್ಮನವರ್, ಇಟ್ಟಂಗಿ ಭಟ್ಟಿಯ ಮಾಲೀಕರು, ಕಾರ್ಮಿಕರು ಹಾಗೂ ಪೋಷಕರು ಹಾಜರಿದ್ದರು.