ಹರಪನಹಳ್ಳಿ : ಒಕ್ಕಣೆ ಕಣಗಳಾದ ರಸ್ತೆಗಳು, ನಿಯಂತ್ರಣಕ್ಕೆ ಮುಂದಾಗದ ಅಧಿಕಾರಿಗಳು

ಹರಪನಹಳ್ಳಿ : ಒಕ್ಕಣೆ ಕಣಗಳಾದ ರಸ್ತೆಗಳು, ನಿಯಂತ್ರಣಕ್ಕೆ ಮುಂದಾಗದ ಅಧಿಕಾರಿಗಳು

ಹರಪನಹಳ್ಳಿ, ಜ. 13- ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು ಮುಖ್ಯ ರಸ್ತೆಗಳು ಈಗ ಒಕ್ಕಣೆ ಕಣಗಳಾಗಿ ಪರಿವರ್ತನೆಯಾಗಿವೆ. ರೈತಾಪಿ ಸಮುದಾಯಕ್ಕೆ ತಾತ್ಕಾಲಿಕವಾಗಿ ಅನುಕೂಲ ಕಲ್ಪಿಸುವ ಈ ರಸ್ತೆ ವಾಹನಗಳ ಸವಾರರ ಪಾಲಿಗೆ ಅಪಾಯದ ಆಮಂತ್ರಣ ನೀಡುತ್ತಿವೆ. 

ರೈತಾಪಿ ಸಮುದಾಯಕ್ಕೆ ತಿಳುವಳಿಕೆ ಮೂಡಿಸುವ ಮೂಲಕ ರಸ್ತೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾದ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯತೆಯ ಮುಸುಕು ಹಾಕಿಕೊಂಡಿದ್ದಾರೆ.

ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು, ರಾಜ್ಯ ಹೆದ್ದಾರಿಗಳ ಮೇಲೆ ಒಕ್ಕಣೆ ಆರಂಭವಾಗಿದೆ. ರೈತರು ತಾವು ಬೆಳೆದ ತೊಗರಿ, ರಾಗಿ, ಜೋಳ, ಹುರುಳಿ ಸೇರಿದಂತೆ ವಿವಿಧ ಬಗೆಯ ಫಸಲನ್ನು ತಂದು ರಸ್ತೆಯ ಮೇಲೆ ಹಾಕಿ ಒಕ್ಕಣೆ ಆರಂಭಿಸಿದ್ದಾರೆ. ಧಾನ್ಯಗಳ ಒಕ್ಕಣೆ ಮುಗಿದ ನಂತರ, ಅವುಗಳಲ್ಲಿನ ಕಸ, ಕಡ್ಡಿ ಹಾಗೂ ದೂಳನ್ನು ಬೇರ್ಪಡಿಸಲು ಗಾಳಿಯಲ್ಲಿ ತೂರುತ್ತಾರೆ. ಈ ಸಂದರ್ಭದಲ್ಲಿ ವಾಹನಗಳ ಸವಾರರು ಸ್ವಲ್ಪ ತಡೆಯಲು ಹೇಳಿದರೂ, ಕೆಲವರು ಸೌಜನ್ಯ ಕಳೆದುಕೊಂಡು ಸವಾರರ ಜೊತೆ ಸಂಘರ್ಷಕ್ಕೆ ಇಳಿಯುತ್ತಾರೆ. ಹಾಗೆಯೇ ಸಂಚರಿಸಿದರಂತು, ತೂರುವ ಧೂಳು  ವಾಹನ ಸವಾರರ ಕಣ್ಣಲ್ಲಿ ಬಿದ್ದು, ಅಪಘಾತವಾದ ನಿದರ್ಶನಗಳು ಇವೆ. ಜೊತೆಗೆ, ರಾಗಿ ಹುಲ್ಲು, ತೊಗರಿ ಕಟ್ಟಿಗೆ ಮೇಲೆ ಬೈಕ್ ಸವಾರರು ಚಲಿಸುವುದು ಕಷ್ಟದ ಕೆಲಸ, ಸ್ವಲ್ಪ ಮೈಮರೆತರೂ ಸಾಕು, ಜಾರಿ ಬೀಳುವುದು ಖಚಿತ. ಸಣ್ಣಪುಟ್ಟ ಅಪಘಾತವಾಗಿ ಗಾಯಗೊಂಡಿರುವ ಹಲವು ಪ್ರಕರಣಗಳನ್ನು ಒಂದೆಡೆ ಇಟ್ಟರೂ, ಒಕ್ಕಣೆ ಕಣದ ಫಸಲಿನಿಂದಾದ ಅಪಘಾತದ ಸಾವಿನ ಪ್ರಕರಣಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.

ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ರೈತಾಪಿ ಸಮುದಾಯಕ್ಕೆ ಒಕ್ಕಣೆ ಕಣ ನಿರ್ಮಾಣಕ್ಕೆಂದೇ ಸಹಾಯಧನ ಯೋಜನೆ ಜಾರಿಯಲ್ಲಿದೆ. ಆದರೆ, ಈ ಕುರಿತು, ರೈತಾಪಿ ಸಮುದಾಯಕ್ಕೆ ಮಾಹಿತಿಯನ್ನು ಅಧಿಕಾರಿಗಳು ಒದಗಿಸದಿರುವುದು ದುರ್ದೈವದ ಸಂಗತಿ. 

ರಸ್ತೆಯ ಮೇಲೆ ಆಹಾರ ಧಾನ್ಯಗಳನ್ನು ಒಕ್ಕಣೆ ಮಾಡುತ್ತಿರುವುದರಿಂದ ಕೇವಲ ವಾಹನಗಳ ಅಪಘಾತವಷ್ಟೇ ಅಲ್ಲ, ರಸ್ತೆ ನಿರ್ಮಿಸಲು ಹಾಕಲಾದ ಡಾಂಬರೀಕರಣದ ರಾಸಾಯನಿಕ ಅಂಶದ ಜತೆಗೆ, ರಸ್ತೆಯ ಮಣ್ಣು, ಇತರೆ ಅಂಶಗಳು ಆಹಾರ ಧಾನ್ಯಗಳಿಗೂ ಪಸರಿಸಿ, ಅದನ್ನು ಸೇವಿಸುವವರಿಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ದೂರಗಾಮಿ ದುಷ್ಪರಿಣಾಮಗಳ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. 

ಈ ಹಿಂದೆ ಹರಪನಹಳ್ಳಿಯ ಸಿವಿಲ್ ಹಿರಿಯ ನ್ಯಾಯಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ರಸ್ತೆಗಳಲ್ಲಿ ಒಕ್ಕಣೆ ಮಾಡುವವರಿಗೆ ಬುದ್ದಿ ಹೇಳಿ ತಿದ್ದಿಕೊಳ್ಳದ ಕೆಲವರಿಗೆ ಪ್ರಕರಣ ದಾಖಲು ಮಾಡಿದ್ದನ್ನ ಸ್ಮರಿಸಿಕೊಳ್ಳಬಹುದು.

ಹೀಗಾಗಿ, ತಾಲ್ಲೂಕು ಆಡಳಿತ ಗ್ರಾಮೀಣ ಭಾಗದ ರಸ್ತೆಯ ಮೇಲೆ ಆರಂಭವಾಗಿರುವ ಒಕ್ಕಣೆ ಕಣಗಳನ್ನು ತೆರವುಗೊಳಿಸುವ ಮೂಲಕ ಕೃಷಿ ಇಲಾಖೆ ಹಾಗೂ ಎಂಎನ್‍ಆರ್‍ಇಜಿ ಯೋಜನೆ ಅಡಿ ಜಾರಿಯಲ್ಲಿರುವ ಸಹಾಯಧನ ಯೋಜನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ಮೂಲಕ, ಅನುಷ್ಠಾನಗೊಳಿಸಿದಾಗ ಮಾತ್ರ ರಸ್ತೆಯ ಒಕ್ಕಣೆ ಸಂಸ್ಕೃತಿಗೆ ನಿಯಂತ್ರಣ ಹಾಕಲು ಸಾಧ್ಯ. 

ದೂರಗಾಮಿ ಆರೋಗ್ಯ ದುಷ್ಪರಿಣಾಮಗಳು ಸಂಭವಿಸುವ ಮುನ್ನ ಅಧಿಕಾರಿ ವಲಯ ಎಚ್ಚೆತ್ತುಕೊಳ್ಳಬೇಕಿರುವುದು ಈಗ ಸಕಾಲ.


– ಕೆ. ಉಚ್ಚೆಂಗೆಪ್ಪ

Leave a Reply

Your email address will not be published.