ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸೋಂಕು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು

ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸೋಂಕು   ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು

ಸೋಂಕಿನ ಬಗ್ಗೆ ಭಯಬೇಡ, ಜಾಗೃತಿ ವಹಿಸಿ ಮಕ್ಕಳ ತಜ್ಞ ಡಾ. ಶ್ರೀನಿವಾಸ್‌ ಸಲಹೆ

ಮಲೇಬೆನ್ನೂರು, ಜ.13- ದಾವಣಗೆರೆ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಪೋಷಕರು ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ಇಂದಿರಾ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟಗೊಂಡ ನಂತರ ಜಗಳೂರು ಮತ್ತು ದಾವಣಗೆರೆ ನಗರದ ಕೆಲ ಶಾಲೆಗಳ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿದ್ದು, ಗುರುವಾರ ಸಂಜೆ ಮಾಹಿತಿ ಪ್ರಕಾರ ಇದುವರೆಗೆ ಜಿಲ್ಲೆಯಲ್ಲಿ 18 ವರ್ಷದೊಳಗಿನ 83 ಮಕ್ಕಳಿಗೆ ಸೋಂಕು ತಗುಲಿದೆ.

ಮಾವಿನಹೊಳೆ ವಸತಿ ಶಾಲೆಯ 53 ಮಕ್ಕಳ ಪೈಕಿ 6 ಮಕ್ಕಳು ಮಾತ್ರ ಚನ್ನಗಿರಿ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದೆಲ್ಲಾ ಮಕ್ಕಳು, ಪ್ರಾಚಾರ್ಯರು ಹಾಸ್ಟೆಲ್‌ನಲ್ಲಿಯೇ ಇದ್ದಾರೆ. ಅವರಿಗೆಲ್ಲಾ ಲಘು ಪ್ರಮಾಣ ರೋಗ ಲಕ್ಷಣಗಳು ಇರುವುದರಿಂದ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿರುವ ಕೊರೊನಾ ಸೋಂಕಿತರ ಪೈಕಿ ಶೇ. 85 ರಿಂದ 90 ರಷ್ಟು ಜನರು ರೋಗಲಕ್ಷಣ ರಹಿತವಾಗಿದ್ದಾರೆ. 

ಸಿ.ಜಿ. ಆಸ್ಪತ್ರೆಯಲ್ಲಿ 25 ಜನ ಮಾತ್ರ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ `ಜನತಾವಾಣಿ’ಗೆ ತಿಳಿಸಿದ್ದಾರೆ. ಗುರುವಾರ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿರುವ 92 ಜನರಲ್ಲಿ 12 ಮಕ್ಕಳಿದ್ದಾರೆ.

ಶಾಲೆಗಳಲ್ಲಿ ಕೇವಲ ಥರ್ಮಲ್‌ ಸ್ಕ್ಯಾನಿಂಗ್‌ ಮಾಡುತ್ತಿದ್ದು, ಇದರಿಂದ ಜ್ವರ ಮಾತ್ರ ಗೊತ್ತಾಗುತ್ತದೆ. ಶೀತ, ಕೆಮ್ಮು ಇದ್ದವರನ್ನು ಶಾಲೆಗೆ ಕರೆದುಕೊಳ್ಳಬಾರದು. ಸಂಪೂರ್ಣ ಆರೋಗ್ಯವಾಗಿರುವ ಮಕ್ಕಳನ್ನು ಮಾತ್ರ ಶಾಲೆಗೆ ಕರೆದುಕೊಳ್ಳಬೇಕು.

ಸ್ವಲ್ಪ ಶೀತ, ಜ್ವರ, ಕೆಮ್ಮು ಇದ್ದರೂ ಪೋಷ ಕರು ನಿರ್ಲಕ್ಷ ಮಾಡದೆ ವೈದ್ಯರ ಬಳಿ ಕರೆದು ಕೊಂಡು ಹೋಗಿ ಚಿಕಿತ್ಸೆ ಕೊಡಬೇಕು. 2 ದಿನಗ ಳಲ್ಲಿ ಕಡಿಮೆಯಾಗದಿದ್ದರೆ ತಕ್ಷಣ ಕೋವಿಡ್‌ ಟೆಸ್ಟ್‌ ಮಾಡಿಸಬೇಕು. ಈ ಕೊರೊನಾ ಬಹಳ ಸೌಮ್ಯವಾದ ಲಕ್ಷಣ ಹೊಂದಿರುವುದರಿಂದ ಪೋಷಕರು ಆತಂಕಗೊಳ್ಳಬಾರದು ಮತ್ತು ಜನರು ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್‌ ಬಳಸುವಂತೆ ಡಾ. ರಾಘವನ್‌ ಮನವಿ ಮಾಡಿದ್ದಾರೆ.

ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ `ಜನತಾವಾಣಿ’ ಯೊಂದಿಗೆ ಮಾತನಾಡಿದ ಮಲೇಬೆನ್ನೂರಿನ ಆದಿತ್ಯ ಮಕ್ಕಳ ಆಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸ್ ಅವರು, ಚಳಿಗಾಲ ಆಗಿರುವುದರಿಂದ ಮಕ್ಕಳು ಸೇರಿದಂತೆ, ದೊಡ್ಡವರಲ್ಲಿಯೂ ಶೀತ, ಜ್ವರ, ಕೆಮ್ಮು ಹೆಚ್ಚಾಗಿ ಕಂಡುಬರುತ್ತಿದೆ. ಭಯ ಬೇಡ, ಆದರೆ ಈ ಬಗ್ಗೆ ಯಾರೂ ನಿರ್ಲಕ್ಷ ಮಾಡದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕಡಿಮೆ ಆಗದಿದ್ದರೆ ಕೂಡಲೇ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು ಎಂದರು.

ಶಾಲೆ ಬಸ್‌ಗಳಲ್ಲಿ ಮಕ್ಕಳನ್ನು ತುಂಬಿ ಕೊಂಡು ಹೋಗಲಾಗುತ್ತಿದ್ದು, ಅಲ್ಲಿ ಸಾಮಾಜಿಕ ಅಂತರ ಇರುತ್ತಿಲ್ಲ ಮತ್ತು ಶಾಲೆಗಳಲ್ಲಿ ಮಕ್ಕಳು ಕುಳಿತುಕೊಳ್ಳುವಾಗಲೂ ಅಂತರಕ್ಕೆ ಹೆಚ್ಚು ಒತ್ತು ಕೊಡಬೇಕು. ಮಾಸ್ಕ್‌, ಸ್ಯಾನಿಟೈಸ್‌ಗಳನ್ನು ಎಲ್ಲರೂ ಕಡ್ಡಾಯವಾಗಿ ಬಳಸಬೇಕು. ಮನೆಯಲ್ಲಿ ಮಕ್ಕಳಿರುವ ಪೋಷಕರು ಸದಾ ಜಾಗೃತಿ ವಹಿಸಬೇಕು. ಸದ್ಯ ಯಾರೂ ಎಲ್ಲಿಗೂ ಪ್ರವಾಸ ಹೋಗಬೇಡಿ ಎಂದು ಡಾ. ಶ್ರೀನಿವಾಸ್‌ ಪೋಷಕರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published.