ನಿದ್ರೆಗೆ ಜಾರಿದ ಚಾಲಕ ಭೀಕರ ಅಪಘಾತದಲ್ಲಿ ಏಳು ಯುವಕರ ಸಾವು

ನಿದ್ರೆಗೆ ಜಾರಿದ ಚಾಲಕ ಭೀಕರ ಅಪಘಾತದಲ್ಲಿ ಏಳು ಯುವಕರ ಸಾವು

ದಾವಣಗೆರೆ, ಜ. 14 – ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾನನಕಟ್ಟೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 18ರಿಂದ 23 ವಯಸ್ಸಿನ ಯುವಕರಾಗಿದ್ದಾರೆ.

ಸಂಕ್ರಾಂತಿಯ ಮುನ್ನಾ ದಿನದ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ನಡೆದ ಅಪಘಾತದಲ್ಲಿ ಜವರಾಯ ಯುವಕರ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾನೆ.

ಮೃತರಲ್ಲಿ ನಾಲ್ವರು ಯಾದಗಿರಿ ಜಿಲ್ಲೆಯ ಸುರಪುರ, ಇಬ್ಬರು ಕೂಡ್ಲಿಗಿ ಜಿಲ್ಲೆಯ ವಿಜಯನಗರ ಹಾಗೂ ಒಬ್ಬರು ವಿಜಯಪುರದ ತಾಳಿಕೋಟೆಯವರಾಗಿದ್ದಾರೆ.

ಮಲ್ಲನಗೌಡ (22), ಸಂತೋಷ್ (21), ಸಂಜೀವ್ (20), ಜೈಭೀಮ್ (18), ರಘು (23), ಸಿದ್ದೇಶ್ (20) ಮತ್ತು ವೇದಮೂರ್ತಿ (18) ಮೃತ ದುರ್ದೈವಿಗಳು.

ಇಂಡಿಕಾ ಕಾರಿನಲ್ಲಿ ಬೆಂಗಳೂರಿನಿಂದ ಹೊಸಪೇಟೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಜನ ಸಾವನ್ನಪ್ಪಿದ್ದಾರೆ. ಇನ್ನೆರಡು ಗಂಟೆ ಪ್ರಯಾಣ ಮುಗಿದಿದ್ದರೆ ಯುವಕರು ತಮ್ಮ ತಾಣ ಸೇರುತ್ತಿದ್ದರು. ಆದರೆ, ವಿಧಿ ಲಿಖಿತ ಬೇರೆಯೇ ಆಗಿತ್ತು.

ಕಾರಿನ ಚಾಲಕ ನಿದ್ದೆಗೆ ಜಾರಿದ ಕಾರಣ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಸಿ.ಬಿ. ರಿಷ್ಯಂತ್ ಅವರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.