ಗ್ರೀನ್ ಸಿಟಿ ಡೋರ್ ನಂಬರ್‌ಗೆ ಒಪ್ಪಿಗೆ

ಗ್ರೀನ್ ಸಿಟಿ ಡೋರ್ ನಂಬರ್‌ಗೆ ಒಪ್ಪಿಗೆ

ನಗರಸಭೆ ಸಾಮಾನ್ಯ ಸಭೆಯಲ್ಲಿ ಜಲಸಿರಿ, ಆಟೋ ನಿಲ್ದಾಣದ ಹೆಸರಿನ ಚರ್ಚೆ

ಹರಿಹರ, ಜ.13- ನಗರದ ಬಹು ದೊಡ್ಡ ಗ್ರೀನ್ ಸಿಟಿ ವಾಣಿಜ್ಯ ಮತ್ತು ವಸತಿ ನಿವೇಶನಗಳಿಗೆ ಡೋರ್ ನಂಬರ್ ನೀಡುವುದಕ್ಕೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒಬ್ಬ ಸದಸ್ಯ ಹೊರತು ಪಡಿಸಿ ಉಳಿದೆಲ್ಲರೂ ಒಪ್ಪಿಗೆ ನೀಡಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಗ್ರೀನ್ ಸಿಟಿ ಯೋಜನೆ ಕುರಿತು ಪ್ರಮುಖವಾಗಿ ಚರ್ಚೆ ನಡೆಯಿತು. ಗ್ರೀನ್ ಸಿಟಿ ಇರುವ ವಾರ್ಡ್‌ನ ಸದಸ್ಯ ಪಿ.ಎನ್. ವಿರುಪಾಕ್ಷ ಮಾತ್ರ ವಿರೋಧ ವ್ಯಕ್ತಪಡಿಸಿದರು. ಕಾನೂನಾತ್ಮಕ ವಾಗಿ ತೊಡಕು ಗಳು ಇಲ್ಲದೇ ಹೋದರೆ ಈ ಯೋಜನೆ ಜಾರಿಗೆ ತರಬಹುದು ಎಂದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಸದಸ್ಯರು ಒಪ್ಪಿಗೆ ನೀಡಿದರು.

ನಗರಸಭೆಯ ಅಧ್ಯಕ್ಷರಾದ ರತ್ನ ಡಿ ಉಜ್ಜೇಶ್ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು.

ಈ ಕುರಿತು ಮಾತನಾಡಿದ ಸದಸ್ಯ ಶಂಕರ್ ಖಟಾವ್ಕರ್, ಸರ್ವೆ ನಂಬರ್ ಹಾಗೂ ಅಳತೆ ಸರಿಯಾಗಿರಬೇಕು. ಸ್ಥಳದಲ್ಲಿರುವ ಕಾನೂನು ತೊಡಕುಗಳನ್ನು ಸರಿಪಡಿಸಿದ ನಂತರ ಅನುಮತಿ ನೀಡಬಹುದು ಎಂದು ಹೇಳಿದರು.

ಎ. ವಾಮನಮೂರ್ತಿ ಮಾತನಾಡಿ, ಯೋಜನೆಯಿಂದ ನಗರಸಭೆಗೆ ವಾರ್ಷಿಕ 2 ಕೋಟಿ ರೂ. ಆದಾಯ ಬಂದು ನಗರದ ಅಭಿವೃದ್ಧಿ ಆಗುತ್ತದೆ ಎಂದರು.

ಪಿ.ಎನ್. ವಿರುಪಾಕ್ಷ ಮಾತನಾಡಿ, ಗ್ರೀನ್ ಸಿಟಿ ಮಾಲೀಕ ರಾಘುಬಾಯಿ ಅವರು ಇದುವರೆಗೂ ನಗರಸಭೆ ಬಳಿ ಚರ್ಚಿಸಿಲ್ಲ. ದಿಢೀರ್ ಸಭೆಗೆ ಆಗಮಿಸಿ ಡೋರ್ ನಂಬರ್ ಕೇಳುತ್ತಿದ್ದಾರೆ. ವಾರ್ಡ್ ಸದಸ್ಯನಾಗಿರುವ ನನ್ನ ಒಪ್ಪಿಗೆ ಪಡೆಯದೇ ಡೋರ್ ನಂಬರ್‌ಗೆ ಅವಕಾಶ ಇಲ್ಲ. ಮುಂದಿನ ಸಭೆಯಲ್ಲಿ ಈ ವಿಷಯ ತರುವಂತೆ ಒತ್ತಾಯಿಸಿದರು.

ದಿನೇಶ್ ಬಾಬು ಮಾತನಾಡಿ, ಗ್ರೀನ್ ಸಿಟಿ ಮಾಲೀಕರು ಸಭೆಗೆ ಆಗಮಿಸಿ ಮಾತನಾಡಲು ಅವಕಾಶ ಕೊಟ್ಟಿರುವುದು ಸರಿಯಲ್ಲ. ಅವರನ್ನು ಸಭೆಯಿಂದ ಹೊರಗೆ ಕಳಿಸಬೇಕು ಎಂದು ಹೇಳಿದರು.

ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ಅಂತಿಮವಾಗಿ ಕಾನೂನು ತೊಡಕು ಇಲ್ಲದೇ ಇದ್ದರೆ ಡೋರ್ ನಂಬರ್‌ಗೆ ಕ್ರಮ ತೆಗೆದುಕೊಳ್ಳ ಬಹುದು ಎಂಬ ನಿರ್ಧಾರಕ್ಕೆ ಬೆಂಬಲಿಸಿದರು.

ಕಾಮಗಾರಿ ತೊಂದರೆ : ಜಲಸಿರಿ ಮತ್ತು ಯುಜಿಡಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೇಗ ಕಾಮಗಾರಿ ಮುಗಿಸಿ ಎಂದು ಕವಿತಾ ಮಾರುತಿ, ಆರ್.ಸಿ. ಜಾವೇದ್ ಹೇಳಿದರು.

ಶಿವಶಂಕರ್ ಹೆಸರಿಗೆ ಆಕ್ಷೇಪ : ಶಿವಮೊಗ್ಗ ರಸ್ತೆಯ ಆಟೋ ನಿಲ್ದಾಣಕ್ಕೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೆಸರು ಇಟ್ಟಿರುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶಂಕರ್ ಖಟಾವ್ಕರ್ ಆಕ್ಷೇಪಿಸಿದರು.

ಜೆಡಿಎಸ್ ಸದಸ್ಯರಾದ ಎ. ವಾಮನಮೂರ್ತಿ, ಮುಜಾಮಿಲ್, ದಾದಾ ಖಲಂದರ್, ಆರ್.ಸಿ. ಜಾವೇದ್, ಉಷಾ ಮಂಜುನಾಥ್, ನಿಂಬಕ್ಕ ಚಂದಾಪೂರ್, ಬಿ. ಅಲ್ತಾಫ್ ಸೇರಿದಂತೆ ಹಲವಾರು ಹೆಸರು ತೆಗೆಯುವುದಕ್ಕೆ ತೀವ್ರವಾಗಿ ವಿರೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತೆ ಎಸ್.ಲಕ್ಷ್ಮಿ, ಆಟೋ ನಿಲ್ದಾಣಕ್ಕೆ ರಾಜಕೀಯ ವ್ಯಕ್ತಿಗಳ ಹೆಸರಿಡಲು ಸರ್ಕಾರದ ಸುತ್ತೋಲೆ ಪ್ರಕಾರ ಅವಕಾಶ ಇರುವುದಿಲ್ಲ. ಕಲಾವಿದರ ಹೆಸರನ್ನು ಹಾಕಲು ಅವಕಾಶವಿದೆ ಎಂದರು.

ವಸಂತ್ ಮಾತನಾಡಿ, ತುರ್ತು ಸಭೆ ಎಂದು ಕೆಳ ಹಂತದ ಸಿಬ್ಬಂದಿಗಳು ತಡವಾಗಿ ಸದಸ್ಯರಿಗೆ ತಿಳಿಸುತ್ತಾರೆ. ಸದಸ್ಯರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸುವುದನ್ನು ಕೈ ಬಿಡಬೇಕು ಎಂದು ಹೇಳಿದರು.

ದಾದಾ ಖಲಂದರ್ ಮಾತನಾಡಿ, ಕೆಲವು ಗುತ್ತಿಗೆದಾರರಿಗೆ ಕಳೆದ ಒಂದು ವರ್ಷವಾದರು ಬಿಲ್ ಪಾವತಿಯಾಗಿಲ್ಲ. ಇನ್ನು ಕೆಲವರು ತಿಂಗಳಲ್ಲೇ ಹಣ ಪಡೆಯುತ್ತಾರೆ. ಇಂತಹ ಬೆಳವಣಿಗೆಯನ್ನು ಕೈ ಬಿಡಬೇಕು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರತ್ನ ಡಿ.ಉಜ್ಜೇಶ್, ಉಪಾಧ್ಯಕ್ಷ ಬಾಬುಲಾಲ್, ಸದಸ್ಯರಾದ ಕೆ.ಜಿ. ಸಿದ್ದೇಶ್, ಎಸ್.ಎಂ. ವಸಂತ್, ಗುತ್ತೂರು ಜಂಬಣ್ಣ, ದಾದಾ ಖಲಂದರ್, ಬಿ. ಅಲ್ತಾಫ್, ನಿಂಬಕ್ಕ ಚಂದಾಪೂರ್, ಉಷಾ ಮಂಜುನಾಥ್, ದಿನೇಶ್ ಬಾಬು ರಜನಿಕಾಂತ್, ಆರ್.ಸಿ. ಜಾವೇದ್, ಪಕ್ಕೀರಮ್ಮ ಪಾರ್ವತಮ್ಮ ಐರಣಿ, ಲಕ್ಷ್ಮೀ ಮೋಹನ್, ಶಾಯಿದಾ ಸನಾವುಲ್ಲಾ, ರಾಘವೇಂದ್ರ, ಮಾರುತಿ ಶೆಟ್ಟಿ, ರಜನಿಕಾಂತ್, ಹನುಮಂತಪ್ಪ, ವಿಜಯಕುಮಾರ್, ಇಬ್ರಾಹಿಂ, ನಗರಸಭೆ ಎಇಇ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.