ಕೊರೊನಾ ನಡುವೆಯೂ ಕುಂದದ ವೈಕುಂಠ ಏಕಾದಶಿ ಆರಾಧನೆಯ ಕಳೆ

ಕೊರೊನಾ ನಡುವೆಯೂ ಕುಂದದ ವೈಕುಂಠ ಏಕಾದಶಿ ಆರಾಧನೆಯ ಕಳೆ

ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಷ್ಟೇ ಅವಕಾಶ ; ಭಕ್ತರಿಂದ ದೇವರ ಪೂಜಾ ಸೇವೆ ಮೇಲೆ ಕೊರೊನಾ ಕರಿನೆರಳು

ದಾವಣಗೆರೆ, ಜ.13- ಕೊರೊನಾ ನಡುವೆಯೂ ನಗರದಲ್ಲಿ ಇಂದು ವೈಕುಂಠ ಏಕಾದಶಿ ಆರಾಧನೆಯ ಸಂಭ್ರಮ ಕಳೆ ಕುಂದಿರಲಿಲ್ಲ. ಆದರೂ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿತಾದರೂ ಪೂಜಾ ಸೇವೆ ಮೇಲೆ ಕೊರೊನಾ ಕರಿನೆರಳು ಬೀರಿತ್ತು.

ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಮುಂಜಾನೆಯಿಂದ ರಾತ್ರಿವರೆಗೂ ವೆಂಕಟೇಶ್ವರನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಪ್ರತಿ ವರ್ಷಕ್ಕಿಂತ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.  

ಎಂಸಿಸಿ §ಬಿ¬ ಬ್ಲಾಕ್‍ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ಸೇವಾ ಸಮಿತಿಯ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ತುರ್ಚಘಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಯರವನಾಗತಿಹಳ್ಳಿ ಕ್ಯಾಂಪ್‍ನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಕೋವಿಡ್ ನಿಯಮದ ಪ್ರಕಾರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಒಂದು ಸಲ 50 ಜನರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗಿತ್ತು. ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ದೇವಾಲಯಗಳಲ್ಲಿ ಭಕ್ತರಿಗೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಎಂಸಿಸಿ ಬಿ ಬ್ಲಾಕ್‍ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ಪ್ರತಿಷ್ಠಾಪನಾ ಮೂರ್ತಿಯ ದರ್ಶನ ಪಡೆದರು. ಉತ್ತರ ವೈಕುಂಠ ದ್ವಾರದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವೈಕುಂಠ ಬಾಗಿಲು ನಿರ್ಮಿಸಲಾಗಿತ್ತು. ಆ ಬಾಗಿಲಿನ ಮೂಲಕ ಭಕ್ತರು ಹೊರಭಾಗಕ್ಕೆ ಆಗಮಿಸಿ ವಿಶೇಷ ಕೃಪಾಶೀರ್ವಾದಕ್ಕೆ ಸಾಕ್ಷಿಯಾದರು.

ದೇವಾಲಯದಲ್ಲಿ ಯಾವುದೇ ತೀರ್ಥ, ಪ್ರಸಾದ ವಿನಿಯೋಗ, ಅರ್ಚನೆ ಸೇರಿದಂತೆ ಭಕ್ತರಿಗೆ ಪೂಜಾ ಸೇವೆಗಳಿಗೆ ಕೊರೊನಾ ಕಾರಣದಿಂದ ಅವಕಾಶ ಇರಲಿಲ್ಲ. ದೇವರಿಗೆ ವಿಶೇಷವಾಗಿ ರವೆ ಪೊಂಗಲ್ ನೈವೇದ್ಯ ಸಮರ್ಪಿಸಲಾಯಿತು. ಬೆಳಗಿನಜಾವ 4 ಗಂಟೆಯಿಂದಲೇ ದೇವರಿಗೆ ತೋಮಾಲೆ ಸೇವೆ, ನಿತ್ಯದ ಆರಾಧನೆ, ಬಲಿಪ್ರದಾನ, ವೈಕುಂಠ ದ್ವಾರ ಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳು, ವಿಷ್ಣು ಸಹಸ್ರನಾಮ, ಗೋವಿಂದ ನಾಮಾವಳಿ, ತಿರುಪ್ಪಾವೈ ಪಾರಾಯಣ, ಜರುಗಿದವು. ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರು ತಂದ ತೆಂಗಿನಕಾಯಿ, ಬಾಳೆಹಣ್ಣು ದೇವರಿಗೆ ಸಮರ್ಪಿಸಲಾಗುತ್ತಿತ್ತು. ಈ ಪ್ರಸಾದ ಕೊಂಡ್ಯೊಯಲು ಅವಕಾಶ ಇರಲಿಲ್ಲ.

ಈ ಏಕಾದಶಿಯಂದು ಉಪವಾಸ ಮಾಡಿದರೆ ವರ್ಷದ 24 ಏಕಾದಶಿ ಮಾಡಿದ ಪುಣ್ಯ ಪ್ರಾಪ್ತಿಯಾಗಲಿದೆ. ಅಲ್ಲದೇ ವಿಷ್ಣು ಸಹಸ್ರನಾಮ, ಗೋವಿಂದ ನಾಮಾವಳಿ, ತಿರುಪ್ಪಾವೈ ಪಾರಾಯಣ ಮಾಡುವುದು ದೇವರ ಕೃಪೆಗೆ ಹೆಚ್ಚು ಪರಿಣಾಮಕಾರಿ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಎಂ.ಎಸ್. ರವಿಭಟ್ಟರ್, ಪ್ರಧಾನ ಟ್ರಸ್ಟಿ ಎಂ.ಎನ್. ರಾಮಮೋಹನ್, ಸೇವಾಕರ್ತ ಮುರಳೀಧರ್ ಆಚಾರ್, ಗೋಪಾಲ ಗೌಡ್ರು, ಸರೋಜ ರೆಡ್ಡಿ, ಸುಧಾ ಸುರೇಶ್ ಮತ್ತಿತರರು ತಿಳಿಸಿದರು.

ತೋಗಟವೀರದಲ್ಲಿ ನರಸಿಂಹಸ್ವಾಮಿ ದರ್ಶನ: ತೋಗಟವೀರ ಕಲ್ಯಾಣ ಮಂಟಪದಲ್ಲಿ ವಿಕಾಸ ತರಂಗಿಣಿ ವತಿಯಿಂದ ಧನುರ್ಮಾಸ ವ್ರತ ಮಹೋತ್ಸವ 29ನೇ ದಿನವಾದ ಇಂದು ಜರುಗಿತು. ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮಿನರಸಿಂಹಸ್ವಾಮಿಯ ಉತ್ತರ ದ್ವಾರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಗವದ್ಗೀತೆ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು. 

ನಾಳೆ ಶುಕ್ರವಾರವೂ ದರ್ಶನಕ್ಕೆ ಅವಕಾಶವಿದೆ. ಸಂಜೆ 4 ಗಂಟೆಗೆ ತಿರುಕಲ್ಯಾಣ ಮಹೋತ್ಸವ, ಅನುಸಂಧಾನ ಜರುಗ ಲಿದೆ. ರಾಮಾಯಣ ಕಾಲದಲ್ಲಿ ಶ್ರೀರಂಗನಾಥ ಸ್ವಾಮಿಯ ವಿಗ್ರಹವನ್ನು ವಿಭೀಷಣನಿಗೆ ಶ್ರೀರಾಮನು ನೀಡಿದಾಗ ಅದನ್ನು ಶ್ರೀರಂಗಂ ತಿರುಚನಾಪಲ್ಲಿಯ ಕಾವೇರಿ ನದಿ ದಡದಲ್ಲಿ ಹನುಮಮಂತ ದೇವರು ಪ್ರತಿಷ್ಠಾಪಿಸಿ, ಪೂಜಿಸುವಂತೆ ವಿಭೀಷಣನಿಗೆ ತಿಳಿಸಿದನು. ವೈಕುಂಠ ದಲ್ಲಿ ರಂಗನಾಥ ಸ್ವಾಮಿಯು 365 ದಿನಗಳಲ್ಲಿ ಧನು ರ್ಮಾಸದ ಒಂದು ದಿನದಲ್ಲಿ ಉತ್ತರಾಭಿಮುಖವಾಗಿ ದರ್ಶನ ನೀಡುತ್ತಾನೆ. ಈ ದಿನದಂದು ಮುಕ್ಕೋಟಿ ದೇವತೆಗಳೇ ಈ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದೇ ವೈಕುಂಠ ಏಕಾದಶಿಯ ವಿಶೇಷ ಎಂದು ವಿಕಾಸ ತರಂಗಿಣಿಯ ಬಿ.ಸತ್ಯನಾರಾಯಣ ಮೂರ್ತಿ ವಿವರಿಸಿದರು.