ವಿವೇಕರು ಯುವಕರಿಗೆ ಸ್ಫೂರ್ತಿ

ವಿವೇಕರು ಯುವಕರಿಗೆ ಸ್ಫೂರ್ತಿ

ಎಸ್ಪಿ ಸಿ.ಬಿ.ರಿಷ್ಯಂತ್

ದಾವಣಗೆರೆ, ಜ. 12- ಭಾರತ ಅಷ್ಟೇ ಅಲ್ಲದೆ, ವಿಶ್ವದಲ್ಲಿಯೇ ಯುವಜನತೆಯನ್ನು ತನ್ನತ್ತ ಸೆಳೆದ ಯೂತ್ ಐಕಾನ್ ಸ್ವಾಮಿ ವಿವೇಕಾನಂದರು ಓರ್ವ ಅತ್ಯುತ್ತಮ ವಾಗ್ಮಿಯಾಗಿದ್ದರು ಎಂದು ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದರು.

ನಗರದ ರಾಮಕೃಷ್ಣ ಆಶ್ರಮದಲ್ಲಿ ಬುಧವಾರ ರಾಷ್ಟ್ರೀಯ ಯುವ ದಿನ ನಿಮಿತ್ತ ಏರ್ಪಡಿಸಿದ್ದ ವಿವೇಕ ಚಿತ್ರ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

 ಕೇವಲ ಹಣ, ಶ್ರೀಮಂತಿಕೆ, ಕೌಟುಂಬಿಕ ಹಿನ್ನೆಲೆ ಇದ್ದರೆ ಮಾತ್ರ ಜೀವನ ಅಲ್ಲ. ಅದರಿಂದಲೇ ಗುರುತಿಸಿ ಕೊಳ್ಳಬೇಕು ಎಂದೇನೂ ಅಲ್ಲ, ಜ್ಞಾನ ಸಂಪಾದನೆಯಿಂದ ವಿಶ್ವದಲ್ಲಿಯೇ ಗುರುತಿಸಿಕೊಳ್ಳ ಬಹುದು ಎಂಬುದಕ್ಕೆ ವಿವೇಕಾನಂದರು ಸ್ಫೂರ್ತಿ ಎಂದರು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾವಣಗೆರೆ ವಿವಿ ರಿಜಿಸ್ಟ್ರಾರ್ ಗಾಯತ್ರಿ ದೇವರಾಜ್ ಮಾತನಾಡಿ, 39 ವರ್ಷ ಬದುಕಿದ್ದ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿಯೇ ಪ್ರಪಂಚವೇ ತನ್ನತ್ತ ತಿರುಗಿ ನೋಡುವಷ್ಟು ಸಾಧನೆ ಮಾಡಿದರು, ಜ್ಞಾನ ಸಂಪಾದಿಸಿದ್ದರು. ಯುವ ನಾಯಕರಾಗಿದ್ದ ಇವರು ಜ್ಞಾನದ ಜತೆ ದೈಹಿಕ ಕ್ಷಮತೆ ಕೂಡ ಮಹತ್ವ ಎಂದು ಪ್ರತಿಪಾದಿಸಿದರು ಎಂದರು.

ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ರಾಮಕೃಷ್ಣ ಆಶ್ರಮದ ಅಧ್ಯಕ್ಷ  ಶ್ರೀ ತ್ಯಾಗೀಶ್ವರಾನಂದ  ಅವರು ಮಾತನಾಡುತ್ತಾ, ವಿವೇಕಾನಂದರು ಬದುಕಿದ್ದು 39 ವರ್ಷ. 29- 30 ವರ್ಷಕ್ಕೆ ಅವರು ಪ್ರಪಂಚ ಗುರುತಿಸುವಂತೆ ಜ್ಞಾನ ಸಂಪಾದಿಸಿದರು. ಆ ನಂತರ 10 ವರ್ಷದಲ್ಲಿ 1500 ವರ್ಷಕ್ಕೆ ಆಗುವಷ್ಟು ಕೊಟ್ಟು ಹೋಗಿದ್ದಾರೆ. ಆದರೆ ಅವರು ಏನು ಕೊಟ್ಟಿದ್ದಾರೆ ಎಂದು ಭಾರತೀಯರಾದ ನಾವು ಇನ್ನೂ ತೆರೆದು ನೋಡಿಲ್ಲ ಎಂದು ವಿದೇಶದ ಚಿಂತಕರೊಬ್ಬರು ಹೇಳುವ ಮಾತನ್ನು ಉಲ್ಲೇಖಿಸಿದರು.

ದಾವಣಗೆರೆ ರಾಮಕೃಷ್ಣ ಮಠ ಏರ್ಪಡಿಸಿದ್ದ ವಿವೇಕ ಚಿತ್ರಕಲಾ ಶಿಬಿರದಲ್ಲಿ ದಾವಣಗೆರೆ ಚಿತ್ರಕಲಾ ಪರಿಷತ್‌ನ  ಸಂತೋಷ ಕುಲಕರ್ಣಿ, ಹರೀಶ್ ಹೆಡ್ನವರ್, ಪ್ರವೀಣ್, ರಾಜೇಶ್, ಯೋಗೀಶ್, ಅಶೋಕ್, ಲೋಕೇಶ್ ಎಸ್‌ಡಿ, ದಾಕ್ಷಾಯಣಿ, ವೀರೇಶ್ ಎಸ್.ಎನ್, ಮಧುಸೂದನ್, ಅಚ್ಚುತಾನಂದ, ರವಿ ಹುದ್ದಾರ್, ಅಶ್ವಿನಿ, ಕಲಾಕೃತಿ ಗ್ರೂಪ್‌ನ ಪ್ರಶಾಂತ್ ಎನ್.  ಭಾಗವಹಿಸಿದ್ದರು. ವಿಜಯ ಕರ್ನಾಟ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ದಾವಣಗೆರೆ ಚಿತ್ರಕಲಾಪರಿಷತ್ ಕಾರ್ಯದರ್ಶಿ ಡಿ. ಶೇಷಾಚಲ, ಈಶ್ವರ ಸಿಂಗ್ ಕವಿತಾಳ ಇತರರು ಇದ್ದರು. ಬ್ರಹ್ಮಚಾರಿ ಚೈತನ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published.