ನಿವೇಶನಗಳ ಸ್ವಚ್ಛತಾ ದಂಡ ಶುರು

ನಿವೇಶನಗಳ ಸ್ವಚ್ಛತಾ ದಂಡ ಶುರು

ಖಾಲಿ ನಿವೇಶನ ಸ್ವಚ್ಛಗೊಳಿಸಿ ದಂಡ ವಿಧಿಸುವ ಪ್ರಕ್ರಿಯೆಗೆ ಪಾಲಿಕೆ ಮೇಯರ್ ಚಾಲನೆ

ದಾವಣಗೆರೆ, ಜ.12- ನಗರದಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಗೆ ದಂಡ ವಿಧಿಸುವ  ಪ್ರಕ್ರಿಯೆಗೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಬುಧವಾರ ಚಾಲನೆ ನೀಡಿದರು.

ಕಸ ತುಂಬಿದ, ಗಿಡ ಗಂಟೆಗಳು ಬೆಳೆದ ಖಾಲಿ ನಿವೇಶನಗಳಿಂದ ನಗರದ  ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತಲ್ಲದೆ, ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿತ್ತು.

ಈ ಬಗ್ಗೆ ಅನೇಕ ಬಾರಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ನೋಟೀಸ್ ನೀಡಿದ್ದರೂ, ಪತ್ರಿಕಾ ಪ್ರಕಟಣೆಗಳ ಮೂಲಕ ಮನವಿ ಮಾಡಿದ್ದರೂ ನಿವೇಶನಗಳ ಸ್ವಚ್ಛತೆಗೆ ಮಾಲೀಕರು ಮುಂದಾಗಿರಲಿಲ್ಲ. ಈ ಬಗ್ಗೆ ಸಾರ್ವಜನಿಕರ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪಾಲಿಗೆ ಇಂತಹದ್ದೊಂದು ಮಹತ್ವದ ಕೆಲಸಕ್ಕೆ ಮುಂದಾಗಿತ್ತು.

ನಗರದ ಸಿದ್ಧವೀರಪ್ಪ ಬಡಾವಣೆಯಿಂದ ಇಂದು ಸ್ವಚ್ಛತಾ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಮಹಾನಗರ ಪಾಲಿಕೆಯಿಂದಲೇ ಖಾಲಿ ನಿವೇಶನ ಸ್ವಚ್ಛಗೊಳಿಸಿ ಪ್ರತಿ ಚದರ ಅಡಿಗೆ ಹತ್ತು ರೂ.ಗಳಂತೆ ದಂಡ ನಿಗದಿಪಡಿಸಿ, ಮಾಲೀಕರು ಕಂದಾಯ ಕಟ್ಟುವಾಗ ಈ ಹಣವನ್ನೂ ಪಾವತಿ ಮಾಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಖಾಲಿ ನಿವೇಶನಗಳಲ್ಲಿ ಗಿಡ-ಗಂಟೆಗಳು ಬೆಳೆದಿದ್ದಲ್ಲಿ ಅಕ್ಕ-ಪಕ್ಕದಲ್ಲಿ ವಾಸಿಸುವ ಜನರಿಗೆ ತೊಂದರೆ ಉಂಟಾಗುತ್ತದೆ. ಹಾವು, ಹಂದಿಗಳು ಸೇರಿಕೊಳ್ಳುತ್ತವೆ. ಇದರಿಂದ ಮಕ್ಕಳು, ಹಿರಿಯರಿಗೆ ತೊಂದರೆ ಆಗುತ್ತದೆ. ಇದನ್ನೆಲ್ಲ ಗಮನಿಸಿ ಈಗಾಗಲೇ ಪಾಲಿಕೆಯು ಮೂರು ಬಾರಿ ಸಾರ್ವಜನಿಕ ಪ್ರಕಟಣೆ ನೀಡಿದೆ. ಆದರೂ ಜನರು ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಮಾಡಿಕೊಂಡಿಲ್ಲ. ಹೀಗಾಗಿ, ಸ್ವತಃ ಮಹಾನಗರ ಪಾಲಿಕೆ ಸಿಬ್ಬಂದಿ ಈಗ ಈ ಕೆಲಸ ಮಾಡಲಿದ್ದಾರೆ ಎಂದು ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಹೇಳಿದ್ದಾರೆ.

ಇಂದು ಸಿದ್ದವೀರಪ್ಪ ಬಡಾವಣೆಯಿಂದ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು,  ಪಾಲಿಕೆಯ ಎಲ್ಲಾ ವಾರ್ಡ್‍ಗಳಲ್ಲಿರುವ ಖಾಲಿ ನಿವೇಶನಗಳ ಸ್ವಚ್ಛತಾ ಕೆಲಸ ನಡೆಯಲಿದೆ. ಇನ್ನಾದರೂ ನಿವೇಶನಾದಾರರು ತಮ್ಮಮ್ಮ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮಹಾಪೌರರು ಹಾಗೂ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್, ಪಾಲಿಕೆಯ ಆರೋಗ್ಯ ವಿಭಾಗದ ಸಹಾಯಕ ನಿರ್ದೇಶಕ ಡಾ. ಸಂತೋಷ್, ಎಆರ್‍ಓ ವಿನಾಯಕ್ ಮತ್ತಿತರರಿದ್ದರು. 

Leave a Reply

Your email address will not be published.