ಮಲೇಬೆನ್ನೂರು ಪುರಸಭೆ: ಕೈಗೆ ಸರಳ ಗೆಲುವು

ಮಲೇಬೆನ್ನೂರು ಪುರಸಭೆ: ಕೈಗೆ ಸರಳ ಗೆಲುವು

ಪ್ರಗತಿ ಸಾಧಿಸಿದ ಕಾಂಗ್ರೆಸ್, ಕಳೆದ ಬಾರಿಯಷ್ಟೇ ಸ್ಥಾನ ಪಡೆದ ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

ಮಲೇಬೆನ್ನೂರು, ಡಿ.30- ಮಲೇಬೆನ್ನೂರು ಪುರಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷವು 12 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ಮಲೇಬೆನ್ನೂರು ಗ್ರಾ.ಪಂ.ನಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ನಡೆದ 2ನೇ ಚುನಾವಣೆ ಇದಾಗಿದ್ದು, ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ – 12, ಬಿಜೆಪಿ – 7, ಜೆಡಿಎಸ್ – 3 ಮತ್ತು ಒಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಡಿ.27 ರಂದು ಪುರಸಭೆಯ 23 ಸ್ಥಾನಗಳ ಪೈಕಿ 21 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ವಾರ್ಡ್ ನಂ.9 ಮತ್ತು 15 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮತ ಎಣಿಕೆ ಗುರುವಾರ ಬೆಳಿಗ್ಗೆ ಹರಿಹರ ನಗರದ ಬಿಇಒ ಕಚೇರಿ ಸಮೀಪದ ಜಿಬಿಎಂಎಸ್ ಪ್ರೌಢಶಾಲೆಯಲ್ಲಿ ಚುನಾವಣಾ ವೀಕ್ಷಕರಾದ ಗಂಗಪ್ಪ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಉಪ ತಹಶೀಲ್ದಾರ್ ಆರ್.ರವಿ, ಚುನಾವಣಾಧಿಕಾರಿಗಳಾದ ಬಿಇಒ ಸಿದ್ದಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣ, ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಅವರ ಸಮ್ಮುಖದಲ್ಲಿ ನಡೆಯಿತು.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ – 8, ಬಿಜೆಪಿ – 7, ಜೆಡಿಎಸ್ – 5 ಮತ್ತು ಮೂವರು ಪಕ್ಷೇತರರು ಆಯ್ಕೆಯಾಗುವ ಮೂಲಕ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಬಿಜೆಪಿ – ಜೆಡಿಎಸ್ ಸೇರಿಕೊಂಡು ಆಡಳಿತ ನಡೆಸಿದ್ದವು.

ಈ ಬಾರಿ ಫಲಿತಾಂಶ ಕಾಂಗ್ರೆಸ್‌ಗೆ ವರದಾನ ವಾಗಿದ್ದು, ಕಳೆದ ಸಲಕ್ಕಿಂತ 4 ಸ್ಥಾನ ಹೆಚ್ಚು ಗಳಿಸಿದೆ. 8 ರಿಂದ 10 ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿ ಲಾಭ – ನಷ್ಟ ಇಲ್ಲದೇ ತನ್ನ 7 ಸ್ಥಾನ ಉಳಿಸಿಕೊಂಡಿದ್ದರೆ, ಜೆಡಿಎಸ್ 3 ಸ್ಥಾನಗಳಲ್ಲಿ ಮಾತ್ರ ಗೆದ್ದು 2 ಸ್ಥಾನ ಕಳೆದುಕೊಂಡಿದೆ. ಪಕ್ಷೇತರರು ಒಂದೇ ಸ್ಥಾನಕ್ಕೆ ಸೀಮಿತವಾಗಿದ್ದಾರೆ.

ಒಂದು ಮತದ ಗೆಲುವು : ಅತಿ ಹೆಚ್ಚು ಮತದಾನವಾಗಿದ್ದ ವಾರ್ಡ್ ನಂ – 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಖಲೀಲ್ ಅವರು ಬಿಜೆಪಿ ಅಭ್ಯರ್ಥಿ ಆನಂದಚಾರ್ ಅವರನ್ನು ಕೇವಲ 1 ಮತದಿಂದ ಸೋಲಿಸಿ, ಅದೃಷ್ಟದ ಗೆಲುವು ಪಡೆದಿದ್ದಾರೆ.

22ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಮಜೀದ್ 483 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಅಕ್ಕ – ತಂಗಿ ಸ್ಪರ್ಧಿಸಿದ್ದ 17ನೇ ವಾರ್ಡಿನಲ್ಲಿ ಅಕ್ಕ ಬಿಜೆಪಿಯ ಅಕ್ಕಮ್ಮ ಬಿ.ಸುರೇಶ್ ಅವರು ತಂಗಿ ಜೆಡಿಎಸ್‌ನ ಶಾರದಮ್ಮ ಅವರನ್ನು ಸೋಲಿಸಿ, ಪುರಸಭೆ ಪ್ರವೇಶಿಸಿದ್ದಾರೆ. ಅತಿ ಕಡಿಮೆ ಮತದಾನವಾಗಿದ್ದ 4ನೇ ವಾರ್ಡಿನಲ್ಲಿ ಬಿಜೆಪಿಯ ಮೀನಾಕ್ಷಮ್ಮ ಜಿಗಳೇರ ಹಾಲೇಶಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಮ್ಮ ವಿರುದ್ಧ 307 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಳೆದ ಬಾರಿ 11ನೇ ವಾರ್ಡಿನಿಂದ ಆಯ್ಕೆಯಾಗಿದ್ದ ಶ್ರೀಮತಿ ಮಂಜುಳಾ ಭೋವಿಕುಮಾರ್ ಈ ಬಾರಿ 10ನೇ ವಾರ್ಡಿನಿಂದ ಮತ್ತೆ ಪುರಸಭೆಗೆ ಬಂದಿದ್ದಾರೆ.

ಕಾಂಗ್ರೆಸ್ – ಬಿಜೆಪಿ ವಿಜಯೋತ್ಸವ : ಪುರಸಭೆ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಶಕ್ತಿ ಪಡೆದುಕೊಂಡ ಕಾಂಗ್ರೆಸ್ ಪಕ್ಷವು ಶಾಸಕ ಎಸ್.ರಾಮಪ್ಪ ಅವರ ನೇತೃತ್ವದಲ್ಲಿ ಅದ್ಧೂರಿ ವಿಜಯೋತ್ಸವ ಆಚರಿಸಿತು. 

ಈ ವೇಳೆ ಶಾಸಕ ಎಸ್.ರಾಮಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಬಿಜೆಪಿಯ ಜನ ವಿರೋಧಿ ಆಡಳಿತದ ವಿರುದ್ಧ ಜನ ಕಾಂಗ್ರೆಸ್ ಪಕ್ಷವನ್ನು ಒಮ್ಮತದಿಂದ ಬೆಂಬಲಿಸುತ್ತಿದ್ದಾರೆ. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ನಿಶ್ಚಿತ ಎಂಬ ವಿಶ್ವಾಸ ವ್ಯಕ್ತ  ಪಡಿಸಿದರು. 

ಈ ವೇಳೆ ಡಾ. ಬಿ.ಚಂದ್ರಶೇಖರ್ ಅವರು ವಿಜೇತ ಅಭ್ಯರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ.ನಾಗೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಮುಖಂಡರಾದ ಸೈಯದ್ ರೋಷನ್, ಬಿ.ವೀರಯ್ಯ, ಜಿಗಳಿ ಆನಂದಪ್ಪ, ಸೈಯದ್ ಜಾಕೀರ್, ನಂದಿಗಾವಿ ಶ್ರೀನಿವಾಸ್, ಎಂ.ಬಿ.ಫೈಜು, ಎ.ಆರೀಫ್ ಅಲಿ, ಕುಂಬಳೂರು ವಾಸು, ಪಿ.ಆರ್.ಕುಮಾರ್, ಯೂನೂಸ್, ಪಿ.ಹೆಚ್.ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

ಫಲಿತಾಂಶ ತೃಪ್ತಿ ತಂದಿದೆ : ಚುನಾವಣೆಯ ನೇತೃತ್ವ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ  `ಜನತಾವಾಣಿ’ಯೊಂದಿಗೆ ಮಾತನಾಡಿ, ಫಲಿತಾಂಶ ತೃಪ್ತಿ ತಂದಿದೆ. ಇನ್ನೂ 2 ಸ್ಥಾನ ನಿರೀಕ್ಷೆ ಮಾಡಿದ್ದೆವು. 1ನೇ ವಾರ್ಡಿನಲ್ಲಿ ಕೇವಲ 1 ಮತದಿಂದ ನಾವು ಸೋತಿದ್ದೇವೆ. ಆದರೆ ಬಿಜೆಪಿ ಸ್ಪರ್ಧಿಸಿದ್ದ ಎಲ್ಲಾ ವಾರ್ಡ್‌ಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಮುಂದೊಂದು ದಿನ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದ್ದು, ಕಾರ್ಯಕರ್ತರು ಬೇಸರಗೊಳ್ಳದೇ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬಿಜೆಪಿ ಬೆಂಬಲಿಸಿದ ಪಟ್ಟಣದ ಎಲ್ಲಾ ಜನರಿಗೆ ನಾವು ಋಣಿಯಾಗಿದ್ದೇವೆ. ನಮ್ಮದೇ ಸರ್ಕಾರ ಇರುವುದರಿಂದ ಕೊಟ್ಟ ಮಾತಿನಂತೆ ಅಭಿವೃದ್ಧಿಗೆ ಅನುದಾನ ತರಲು ಶ್ರಮಿಸುತ್ತೇವೆ ಎಂದು ವಾಗೀಶ್ ಹೇಳಿದರು.

ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಕೆ.ಜಿ.ವೀರನಗೌಡ್ರು, ಬೆಣ್ಣೆಹಳ್ಳಿ ರಾಜಣ್ಣ, ಕೆ.ಜಿ.ರಂಗನಾಥ್, ಬೆಣ್ಣೆಹಳ್ಳಿ ಬಸವರಾಜ್, ಉಳ್ಳಳ್ಳಿ ಸಿದ್ದೇಶ್, ಪಾನಿಪೂರಿ ರಂಗನಾಥ್, ದೊರೆ, ಧನು ಮತ್ತು ದಿಶಾ ಕಿಮಿಟಿ ಸದಸ್ಯ ಐರಣಿ ಅಣ್ಣೇಶ್, ಜಿ.ಪಿ.ಹನುಮಗೌಡ, ವಿಜೇತ ಅಭ್ಯರ್ಥಿಗಳಾದ ಬೆಣ್ಣೆಹಳ್ಳಿ ಸಿದ್ದೇಶ್, ಮೀನಾಕ್ಷಮ್ಮ ಜಿಗಳೇರ ಹಾಲೇಶಪ್ಪ, ಸುಲೋಚನಮ್ಮ ಕುಮಾರ್, ಗೌಡ್ರ ಮಂಜಣ್ಣ, ಸುಧಾ ಪಿ.ಆರ್.ರಾಜು, ಅಕ್ಕಮ್ಮ ಬಿ.ಸುರೇಶ್, ಬಿ.ಮಂಜುನಾಥ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವದಲ್ಲಿದ್ದರು.

ಜೆಡಿಎಸ್ ಪ್ರತಿಕ್ರಿಯೆ : ಮಲೇಬೆನ್ನೂರು ಪುರಸಭೆ ಹಾಗೂ ಹರಿಹರ ನಗರಸಭೆಯ ಉಪಚುನಾವಣೆಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಅವರು, ಜನರ ತೀರ್ಪನ್ನು ಒಪ್ಪಿಕೊಂಡು ಪಕ್ಷ ಸಂಘಟನೆಯನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಬಹಳ ಮುಖ್ಯವಾಗಿರುತ್ತಾರೆ. ಇದು ಜೆಡಿಎಸ್‌ಗೆ ಆಗಿರುವ ಹಿನ್ನಡೆ ಅಲ್ಲ, ಸಂಘಟನೆಯಲ್ಲಿ ನಾವು ಸದೃಢರಾಗಿದ್ದೇವೆ. ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಎಲ್ಲಾ ವಾರ್ಡ್‌ಗಳಲ್ಲಿ ಪೈಪೋಟಿ ನೀಡಿದ್ದಾರೆ. ಮುಂಬರುವ ಜಿ.ಪಂ., ತಾ.ಪಂ., ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಅವರ ನೇತೃತ್ವದಲ್ಲಿ ನಮ್ಮ ಸಾಮರ್ಥ್ಯ ಸಾಬೀತು ಪಡಿಸಲಿದ್ದೇವೆ. ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿದ ಜನರಿಗೆ ಆಭಾರಿಯಾಗಿದ್ದೇವೆ ಎಂದು  ಹೇಳಿದರು.