ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬಸ್ ಹರಿದು ಪಾದಚಾರಿ ಸಾವು

ದಾವಣಗೆರೆ, ಡಿ.28- ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪಾದಚಾರಿ ಮೇಲೆ ಸ್ಟೀಲ್ ಕಂಪನಿಯ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ (ಅರುಣ ಸರ್ಕಲ್) ವೃತ್ತದಲ್ಲಿ ಇಂದು ರಾತ್ರಿ ಸಂಭವಿಸಿದೆ.

ಎಸ್ ಪಿಎಸ್ ನಗರದ ಡಾ. ರಾಜಕುಮಾರ್‌ ಶಾಲೆಯ ಸಮೀಪದ ವಾಸಿ, ಬಾರ್ ಕೆಲಸಗಾರ ಬಸಪ್ಪ (60) ಮೃತ ದುರ್ದೈವಿ.

ಪ್ರತಿ ದಿನದಂತೆ ಇಂದೂ ಸಹ ಕೆಲಸ ಮುಗಿಸಿಕೊಂಡು ಅರುಣ ಚಿತ್ರ ಮಂದಿರ ಎದುರಿನ ಹಳೆ ಪಿ.ಬಿ. ರಸ್ತೆ ದಾಟಿ ಮನೆ ಕಡೆಗೆ ನಡೆದುಕೊಂಡು ಹೊರಟಿದ್ದ ಬಸಪ್ಪನಿಗೆ ಹೈಸ್ಕೂಲ್ ಮೈದಾನದ ಕಡೆಯಿಂದ ಬಂದು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕಂಪನಿ ಕೆಲಸಗಾರರನ್ನು ಇಳಿಸಿದ ಬಸ್ ಅದೇ ವೃತ್ತದಲ್ಲಿ ರೇಣುಕಾ ಮಂದಿರ ಕಡೆಗೆ ಯು ಟರ್ನ್ ತೆಗೆದುಕೊಳ್ಳುವಾಗ ಡಿಕ್ಕಿ ಹೊಡೆದಿದೆ. ಬಸಪ್ಪ ಕೆಳಗೆ ಬಿದ್ದಿದ್ದಾರೆ. ಇತ್ತ ಕೆಳಗೆ ಬಿದ್ದಿದ್ದ ಬಸಪ್ಪ ಮೇಲೇಳು ವಷ್ಟರಲ್ಲಿ ಚಕ್ರಗಳು ತಲೆ ಮೇಲೆ ಹರಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಈ ಸಂಬಂಧ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತಕ್ಕೆ ಆಕ್ರೋಶ : ಅಪಘಾತದ ಬಳಿಕ ಘಟನೆ ಖಂಡಿಸಿ ಸಾರ್ವಜನಿಕರು ಡಿಕ್ಕಿಪಡಿಸಿದ ಬಸ್ ನ ಗಾಜು ಪುಡಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಪಟ್ಟು‌ ಹಿಡಿದು ಪ್ರತಿಭಟಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಆಗಿತ್ತು. ಬಡಾವಣೆ ಠಾಣೆ ಪೊಲೀಸರು ಹಾಗೂ ದಕ್ಷಿಣ ಸಂಚಾರ ಪೊಲೀಸರು ಜನರನ್ನು ಚದುರಿಸಿ ಟ್ರಾಫಿಕ್ ಜಾಮ್ ತೆರವುಗೊಳಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪಿ.ಬಿ. ರಸ್ತೆಯ ರೇಣುಕಾ ಮಂದಿರದ ಬಳಿ ಕಳೆದ ವಾರವಷ್ಟೇ ಪಾದಚಾರಿ ಮಹಿಳೆಯ ಮೇಲೆ ಟಿಪ್ಪರ್ ಲಾರಿಯೊಂದು ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.