ವಿದ್ಯುತ್ ಟ್ರಾನ್ಸ್‌ಫಾರ್ಮರ್‍ಗೆ ಖಾಸಗಿ ಬಸ್ ಡಿಕ್ಕಿ

ದಾವಣಗೆರೆ, ಡಿ.22- ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‍ಗೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಹೊರ ವಲಯದ ಎಲೆಬೇತೂರು ಗ್ರಾಮದ ಬಳಿ ಇಂದು ಸಂಭವಿಸಿದೆ. 

ನಗರದಿಂದ ಜಗಳೂರು ಕಡೆಗೆ ಎಲೆಬೇತೂರು ಮಾರ್ಗವಾಗಿ ಹೊರಟಿದ್ದ ಶಿವಮೊಗ್ಗ ನೋಂದಣಿಯ ಖಾಸಗಿ ಬಸ್ ರಸ್ತೆಯ ತಿರುವಿನಲ್ಲಿ ಸಂಚರಿಸುತ್ತಿದ್ದಾಗ, ಎಲೆಬೇತೂರು ಕ್ರಾಸ್ ಬಳಿ ಅನಿರೀಕ್ಷಿತವಾಗಿ ಎದುರಿಗೆ ಬಂದ ಬೈಕ್ ಸವಾರನಿಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಕ್ಕದಲ್ಲೇ ಇದ್ದ ಅಡಿಕೆ ತೋಟಕ್ಕೆ ಹೊಂದಿಕೊಂಡಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 

ಡಿಕ್ಕಿ ಹೊಡೆದಿದ್ದರಿಂದ ಕಂಬ
ಮುರಿದಿದ್ದು, ಅದೃಷ್ಟವಶಾತ್ ಅಪಘಾತ ಸಂಭವಿಸಿದ ವೇಳೆ ಎಲೆಬೇತೂರು ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ಹಾಗಾಗಿ ದೊಡ್ಡ ಅನಾಹುತವೇ ತಪ್ಪಿದೆ. 

ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು, ದಾರಿ ಹೋಕರು ಗಾಯಾಳುಗಳ ನೆರವಿಗೆ ಧಾವಿಸಿದ್ದು, ಗಾಯಗೊಂಡ ಬಹುತೇಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.