ಹೆಣ್ಣು ಮಗು ಎಂದು ಕೊಂದ ತಂದೆಗೆ ಥಳಿತ: ರಸ್ತೆಯಲ್ಲಿ ಮೆರವಣಿಗೆ ಮಾಡಿದ ಜನರು

ದಾವಣಗೆರೆ, ಡಿ.20- ಹೆಣ್ಣು ಮಗು ಜನಿಸಿದೆ ಎಂದು ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಬಿಟ್ಟು ಕೊಂದು ಹಾಕಿದ್ದ ತಂದೆಗೆ ಜನರು ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ನಗರದ ಅಖ್ತರ್ ರಜಾಕ್‍ ವೃತ್ತದ ಬಳಿ ನಡೆದಿದೆ. ಈ ಘಟನೆ ಮೂರು ತಿಂಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.

ಮನ್ಸೂರ್ ಮಗುವಿನ ಪ್ರಾಣ ತೆಗೆದ ತಂದೆ. ಈತ ಮಿಲ್ಲತ್ ಕಾಲೋನಿಯ ನಿವಾಸಿಯಾಗಿದ್ದು, ಮಗಳನ್ನು ಸಾಯಿಸಿದ್ದಾನೆ ಎಂಬ ಕಾರಣಕ್ಕೆ ಸ್ಥಳೀಯರು, ಕಳೆದ ದಿನ ಆರೋಪಿ ಮನ್ಸೂರ್ ಹಾಗು ಆತನ ತಮ್ಮ ಮೈನುದ್ದೀನ್‍ನನ್ನು ಹಿಗ್ಗಾಮುಗ್ಗ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಈ ಹಿಂದೆ ಮಸೀದಿ ಜಮಾಯತ್‍ನಿಂದ ಪಂಚಾಯಿತಿ ಮಾಡಲು ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿ ಬಾರದ ಹಿನ್ನೆಲೆ ಜನರು ಮನ್ಸೂರ್ ಹಾಗೂ ಆತನ ತಮ್ಮ ಮೈನುದ್ದೀನ್ ಅನ್ನು ಹಿಡಿದು ಜಮಾಯತ್ ಬಳಿ ಕರೆ ತಂದಿದ್ದಾರೆ.

ಆರೋಪಿ ಮನ್ಸೂರ್ ಸಹೋದರನಾಗಿರುವ ಕಾಂಗ್ರೆಸ್ ಮುಖಂಡ ಮೈನುದ್ದೀನ್ ಇದರಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಮೈನುದ್ದೀನ್ ಆತನ ಅಣ್ಣ ಮನ್ಸೂರ್ ಇಬ್ಬರನ್ನು ಸಾರ್ವಜನಿಕರು ಥಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಹಲ್ಲೆ ಮಾಡಿದ್ದ ವೇಳೆ ಅಸ್ವಸ್ಥಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಸಹ ಆತ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನ ಆರೋಪಿಗಳನ್ನು ಮೆರವಣಿಗೆ ಮಾಡಿಸಿದ್ದಾರೆ. ಘಟನೆ ಕುರಿತು ಮೂರು ತಿಂಗಳ ಬಳಿಕ ಸತ್ಯ ಹೊರ ಬಂದಿದ್ದು, ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.