ಸಂಚಾರಿ ಪೊಲೀಸರ ಜೊತೆ ಬೈಕ್ ಸವಾರನ ಜಗಳ

ದಾವಣಗೆರೆ, ಡಿ.19- ದಂಡ ಹಾಕಿದ ಹಿನ್ನೆಲೆಯ ಸಂಚಾರಿ ಪೊಲೀಸರ ಜೊತೆ ಬೈಕ್ ಸವಾರನೊಬ್ಬ ಜಗಳ ತೆಗೆದ ಘಟನೆ ನಗರದ ರೇಣುಕಾ ಮಂದಿರದ ಬಳಿ ಇಂದು ನಡೆದಿದೆ. 

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಂತೆ ತಪಾಸಣೆ ನಡೆಸುತ್ತಿದ್ದಾಗ ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೇ ಬಂದಿದ್ದು, ಈ ವೇಳೆ ಪೊಲೀಸರು ತಡೆದು 500 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿವಿಧ ಕಾರಣಗಳನ್ನು ಹೇಳಿದ್ದ ಬೈಕ್ ಸವಾರ ಬಳಿಕ ದಂಡವನ್ನು ಕಟ್ಟಿದ್ದಾನೆ. ಆದರೆ, ಆತ ಪೊಲೀಸರೊಂದಿಗೆ ತಂಟೆ ತೆಗೆದಿದ್ದು, ಬೇರೆಯವರು ಹೆಲ್ಮೆಟ್ ಹಾಕದೇ ಓಡಾಡುವವರಿಗೆ ಯಾಕೆ ದಂಡು ಹಾಕುತ್ತಿಲ್ಲ. ನನಗೆ ಯಾಕೆ ದಂಡ ಹಾಕಿದ್ದೀರಿ ಎಂದು ವಾದಿಸಿದ್ದಾನೆ. ಇದು ಸರ್ಕಾರಿ ನಿಯಮವಾಗಿದ್ದು, ಯಾರೇ ಸಂಚಾರಿ ನಿಯಮ ಉಲ್ಲಂಘಿಸಿದರೂ ಎಲ್ಲರಿಗೂ ದಂಡ ಹಾಕುತ್ತೇವೆ ಎಂದು ಹೇಳಿದರೂ ಬಿಡದೇ ವಾದಿಸಿದ್ದಾನೆ. 

ಪೊಲೀಸರು ನಿಯಮದ ಬಗ್ಗೆ ವಿವರಿಸಿ, ಹೇಳಿ ದರೂ ಕೇಳದೇ ಬೇರೆಯವರನ್ನು ತೋರಿಸಿ ದಂಡ ಹಾಕುವಂತೆ ಒತ್ತಾಯ ಮಾಡುತ್ತಿದ್ದ. ಬಳಿಕ ಟ್ರಾಫಿಕ್ ಸಿಪಿಐ ತಿಮ್ಮಣ್ಣ ಬಂದು ಬೈಕ್ ಸವಾರನಿಗೆ ತಿಳಿ ಹೇಳಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪೊಲೀಸರಿಗೆ ಇಂತ ಪ್ರಕರಣಗಳು ತಲೆನೋವಾಗಿ ಪರಿಣಮಿಸಿವೆ.