ಕಾರು-ದ್ವಿಚಕ್ರ ವಾಹನ ಡಿಕ್ಕಿ ವೈದ್ಯಕೀಯ ವಿದ್ಯಾರ್ಥಿನಿ ಸಾವು

ದಾವಣಗೆರೆ, ಡಿ.16- ಕಾರು – ದ್ವಿಚಕ್ರ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಎಂಸಿಸಿ ಬಿ ಬ್ಲಾಕ್‌ನ ಈಜುಕೊಳದ ಬಳಿ ಗುರುವಾರ ನಡೆದಿದೆ. 

ಬಾಪೂಜಿ ಡೆಂಟಲ್ ಕಾಲೇಜಿನ ಸ್ನಾತಕೋತ್ತರ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಉಂಬರ್‌ಗಾವ್ ಮೂಲದ ಡಾ. ಪ್ರಿಯಾಂಕಾ ಮೊರಾನಿ (25) ಮೃತಪಟ್ಟ ದುರ್ದೈವಿ. 

ಡಾ. ಪ್ರಿಯಾಂಕ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದರು. ಅದೇ ಸಮಯಕ್ಕೆ ಮಾಮಾಸ್ ಜಾಯಿಂಟ್ ರಸ್ತೆ ಕಡೆಯಿಂದ ಬಂದ ಕೇರಳ ನೋಂದಣಿ ಸಂಖ್ಯೆಯ ಕಾರಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ. ದ್ವಿಚಕ್ರವಾಹನದಿಂದ ಕೆಳಗೆ ಬಿದ್ದ ಯುವತಿಯ ತಲೆ ಫುಟ್‌ಪಾತ್‌ನ ಸಿಮೆಂಟ್ ಕಲ್ಲಿಗೆ ಜೋರಾಗಿ ಬಡಿದ ಪರಿಣಾಮ ಭಾರೀ ಏಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಯುವತಿ ತಲೆಗೆ ಹೆಲ್ಮೆಟ್ ಧರಿಸಿದ್ದರಾದರೂ, ಅದು ಅರ್ಧ ಹೆಲ್ಮೆಟ್, ಅದರಲ್ಲೂ ಸುರಕ್ಷಿತವಾಗಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಸುರಕ್ಷಿತವಾದ ಹೆಲ್ಮೆಟ್ ಧರಿಸಿದ್ದರೆ ಅಪಘಾತದಿಂದ ಜೀವವಾದರೂ ಉಳಿಯುತ್ತಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.