ಹರಿಹರ : ಸರಣಿ ಕಳ್ಳತನ, 6 ಲಕ್ಷ ರೂ. ನಗದು, ಆಭರಣ ದೋಚಿದ ಕಳ್ಳರು

ಹರಿಹರ, ಡಿ.14 – ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು, 6 ಲಕ್ಷ ರೂ. ನಗದು ಸೇರಿದಂತೆ, ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.

ನಿನ್ನೆ ತಡರಾತ್ರಿ ಕಳ್ಳರು ದೊಡ್ಡಿಬೀದಿ ನಿವಾಸಿಗಳಾದ ಅಶೋಕ್‌ ತಂದೆ ಗೌಡ್ರ ಪುಟ್ಟಪ್ಪ ಎಂಬುವವರ ಮನೆಯಲ್ಲಿ 6 ಲಕ್ಷ ರೂ. ನಗದು ಹಣ, ಬಂಗಾರದ ಉಂಗುರ ಹಾಗೂ ಬೀರೇಶ್ ಎಂಬುವವರ ಮನೆಯಲ್ಲಿ ಬಂಗಾರದ ಕಿವಿಯ ಓಲೆ ಸೇರಿದಂತೆ ಇತರೆ ಬಂಗಾರದ ವಸ್ತುಗಳು ಮತ್ತು ಬೆಳ್ಳಿಯ ಆಭರಣಗಳ ಕಳ್ಳತನ ಮಾಡಿದ್ದು, ಜೊತೆಗೆ ಇನ್ನೊಂದು ಮನೆಗೆ ಗೋಡೆಯನ್ನು ಒಡೆದಿದ್ದಾರೆ.

ಕಳ್ಳತನ ನಡೆದ ಸ್ಥಳಕ್ಕೆ ದಾವಣಗೆರೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದ ಅಧಿಕಾರಿಗಳು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದಾಗ ಶ್ವಾನವು ನಗರದ ಹಳ್ಳದಕೇರಿ ಸೇತುವೆಯ ಹತ್ತಿರಕ್ಕೆ ಹೋಗಿ ನಿಂತಿವೆ.

ಈ ಸಂದರ್ಭದಲ್ಲಿ ಪಿಎಸ್ಐ ಸುನಿಲ್, ಬಸವರಾಜ್ ತೇಲಿ, ಲತಾ ತಾವಳೆಕರ್, ಸಿಬ್ಬಂದಿಗಳಾದ ಸತೀಶ್, ನಾಗರಾಜ್, ಸಂತೋಷ್ ಹಾಗೂ ಇತರರು ಹಾಜರಿದ್ದರು.