ಅಪ್ರಾಪ್ತೆಯರ ವಿವಾಹ : ತಂದೆ, ಮಗಳು ಸೇರಿ ಮೂವರಿಗೆ ಜೈಲು ಶಿಕ್ಷೆ

ದಾವಣಗೆರೆ, ಡಿ.14- ಅಪ್ರಾಪ್ತ ಬಾಲಕಿಯರಿಗೆ ವಿವಾಹ ಮಾಡಿಸಿದ್ದ ಆರೋಪದಡಿ ತಂದೆ, ಮಗಳು ಸೇರಿ ಮೂವರಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ಕೊಟ್ರಪ್ಪ (65), ಈತನ ಮಗಳು ಮಲ್ಲಮ್ಮ ಮತ್ತು ಅಳಿಯ ಭರತ್ ಅಲಿಯಾಸ್ ಗೋಪಾಲ್ ಶಿಕ್ಷೆಗೆ ಗುರಿಯಾದವರು.

2011, ಡಿಸೆಂಬರ್ 4 ರಂದು ದಾವಣಗೆರೆಗೆ ಬಂದಾಗ ಪ್ರಮುಖ ಆರೋಪಿ ಕೊಟ್ರಪ್ಪ ದಾವಣಗೆರೆ ರೈಲ್ವೆ ನಿಲ್ದಾಣದ ಹತ್ತಿರ ಭೇಟಿಯಾದ ಸುಮಾರು 14 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ತನ್ನ ಊರಿಗೆ, ಅಲ್ಲಿಂದ ಗುಜರಾತಿಗೆ ಕರೆದುಕೊಂಡು ಹೋಗಿ ಗುಜರಾತ್‌ನ ಇಬ್ಬರು ಯುವಕರೊಂದಿಗೆ ಮದುವೆ ಮಾಡಿಸಿ, ಗುಜರಾತ್‌ನಲ್ಲಿ ಬಿಟ್ಟು ಬಂದಿದ್ದ.

ಪ್ರಮುಖ ಆರೋಪಿಯ ಮಗಳು ಗುಜರಾತ್‌ ನಲ್ಲಿರುವ ಮಲ್ಲಮ್ಮ ಹಾಗೂ ಅಳಿಯ ಭರತ್ ಈ ಕೃತ್ಯಕ್ಕೆ ಸಹಕರಿಸಿದ್ದರು. ಪ್ರಮುಖ ಆರೋಪಿ ಮತ್ತು ಮಗಳು, ಅಳಿಯ ಹಾಗೂ ಅಪ್ರಾಪ್ತೆಯರ ಮದುವೆಯಾದ ಇಬ್ಬರು ಆರೋಪಿಗಳು ಸೇರಿ ಒಟ್ಟು ಐವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಸಿಪಿಐ ಚಂದ್ರಹಾಸ್ ಲಕ್ಷಣ್‌ ನಾಯ್ಕ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಅಪ್ರಾಪ್ತೆಯರನ್ನು ಮದುವೆಯಾಗಿದ್ದ ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದು, ಕೊಟ್ರಪ್ಪ, ಕೊಟ್ರಪ್ಪನ ಮಗಳು ಮಲ್ಲಮ್ಮ ಹಾಗೂ ಮಲ್ಲಮ್ಮಳ ಗಂಡ ಭರತ್ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಈ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಇಂದು ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದರು.