ದೇವರಬೆಳಕೆರೆ ಪಿಕಪ್ ಜಲಾಶಯಕ್ಕೆ ಮಾನವ ಚಾಲಿತ ಗೇಟ್‌ಗೆ ಪ್ರಸ್ತಾವನೆ

ದೇವರಬೆಳಕೆರೆ ಪಿಕಪ್ ಜಲಾಶಯಕ್ಕೆ ಮಾನವ ಚಾಲಿತ ಗೇಟ್‌ಗೆ ಪ್ರಸ್ತಾವನೆ

ತಡೆಗೋಡೆ ಬಿರುಕು ಬಿಟ್ಟಿರುವುದರಿಂದ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ. 

– ಇಂಜಿನಿಯರ್ ಚಂದ್ರಹಾಸ್‌ ಸ್ಪಷ್ಟನೆ

ಮಲೇಬೆನ್ನೂರು, ನ.24- ದೇವರಬೆಳಕೆರೆ ಪಿಕಪ್‌ ಜಲಾಶಯದ ಗೇಟ್‌ ಬಳಿ ಸಂಗ್ರಹವಾಗಿ ನಿಂತಿರುವ ಜಲ ಸಸ್ಯರಾಶಿ ತೆರವು ಕಾರ್ಯಾಚರಣೆ 3ನೇ ದಿನವಾದ ಬುಧವಾರ ನಡೆಯಿತು.

ಈ ದಿನ ಸ್ಥಳಕ್ಕೆ ಆಗಮಿಸಿದ್ದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಹಾಸ್‌ ಅವರು ಜಲಸಸ್ಯ ರಾಶಿ ತೆರವು ಕಾರ್ಯವನ್ನು ಶಾಸಕ ಎಸ್‌. ರಾಮಪ್ಪ ಅವರೊಂದಿಗೆ ವೀಕ್ಷಿಸಿದರು.

ನಂತರ `ಜನತಾವಾಣಿ’ಯೊಂದಿಗೆ ಮಾತನಾಡಿದ ಚಂದ್ರಹಾಸ್‌ ಅವರು, ಈ ಪಿಕಪ್ ಜಲಾಶಯಕ್ಕೆ 16 ಗೋಡ್‌ಬಳೆ ಗೇಟ್‌ ಗಳನ್ನು ಹಾಕಲಾಗಿದ್ದು, ಅದರಲ್ಲಿ 4 ಗೇಟ್‌ಗಳನ್ನು ತೆರವು ಮಾಡಿ ಮಾನವ ಚಾಲಿತ ಗೇಟ್‌ಗಳನ್ನು ಅಳವಡಿಸಲು ನೀರಾವರಿ ನಿಗಮಕ್ಕೆ ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುತ್ತೇವೆ. 2 ತಿಂಗಳ ಹಿಂದೆ ಸ್ವಲ್ಪ ಪ್ರಮಾಣದ ಜಲ ಸಸ್ಯರಾಶಿ ಬಂದು ನಿಂತಿದ್ದಾಗ ರೈತರು ಮತ್ತು ದಿನಗೂಲಿ ನೌಕರರು ತೆರವು ಮಾಡಿದ್ದರು.

ಆದರೀಗ ಸೂಳೆಕೆರೆ ಕೋಡಿ ಬಿದ್ದು ನೀರು ಹರಿದು ಬರುತ್ತಿರುವುದರಿಂದ ಜಲ ಸಸ್ಯರಾಶಿ ಹೆಚ್ಚಿನ ಪ್ರಮಾಣದಲ್ಲಿ ಬಂದು ಶೇಖರಣೆಯಾಗಿ ನಿಂತಿರುವುದರಿಂದ ಸ್ವಯಂಚಾಲಿತ ಗೋಡ್‌ಬಳೆ ಗೇಟ್‌ಗಳು ಕೆಲಸ ಮಾಡುತ್ತಿಲ್ಲ. ಹಾಗಾಗಿ ಜಲಾಶಯದ ಹೆಚ್ಚುವರಿ ನೀರು ಹೊರಹೋಗದೆ ನಿಂತಿರುವುದರಿಂದ ಹಿನ್ನೀರಿನಿಂದ ರೈತರಿಗೆ ತೊಂದರೆ ಆಗಿದೆ. ಶಾಸಕ ರಾಮಪ್ಪನವರು ರೈತರ ಹಿತದೃಷ್ಟಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಇಟಾಚಿ ಮೂಲಕ ಜಲ ಸಸ್ಯರಾಶಿ ತೆರವು ಮಾಡಿಸುತ್ತಿದ್ದಾರೆ.

ಈ ಕಾಮಗಾರಿಯ ಪ್ರಸ್ತಾವನೆ ನನಗೆ ಬಂದಿಲ್ಲ. ಭದ್ರಾ ನಾಲಾ ಉಪವಿಭಾಗದ ಇಇ ಸಂತೋಷ್‌ ಅವರು ಭದ್ರಾ ನಾಲಾ ನಂ-3 ಇಇ ಚಿದಂಬರ್‌ಲಾಲ್‌ ಅವರಿಗೆ ಪ್ರಸ್ತಾವನೆ ಕೊಟ್ಟಿದ್ದೇನೆಂದು ಹೇಳಿದ್ದಾರೆ. ನನಗೆ ಪ್ರಸ್ತಾವನೆ ಬಂದ ತಕ್ಷಣ ಅನುದಾನ ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಚಂದ್ರಹಾಸ್‌ ತಿಳಿಸಿದರು.

ಹಳೆ ಬಿರುಕು : ಜಲಾಶಯದ ಕಲ್ಲಿನ ತಡೆಗೋಡೆ ಬಿರುಕು ಬಿಟ್ಟಿರುವುದು ಈಗ ಆಗಿರುವುದಲ್ಲ, ಅದು ಮೊದಲೇ ಇತ್ತು. ಇದರಿಂದ ಜಲಾಶಯಕ್ಕೆ ಯಾವುದೇ ತೊಂದರೆ ಇಲ್ಲ. ಈ ಬಗ್ಗೆ ರೈತರಿಗೆ ಆತಂಕ ಬೇಡ ಎಂದು ಅಧೀಕ್ಷಕ ಇಂಜಿನಿಯರ್‌ ಚಂದ್ರಹಾಸ್‌ ಸ್ಪಷ್ಟಪಡಿಸಿದರು.

ಈ ವೇಳೆ ಹಾಜರಿದ್ದ ಗ್ರಾಮದ ಜೆಡಿಎಸ್‌ ಮುಖಂಡ ಕರಿಬಸಪ್ಪ ಅವರು, ಕಲ್ಲಿನ ತಡೆಗೋಡೆ ಬಿರುಕು ಬಿಟ್ಟಿರುವುದು ಬಹಳ ದಿನಗಳಿಂದಲೂ ಇದೆ. ಆದರೆ ಕೆಲವರು ಈಗ ಇದನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಎಇಇ ಸಂತೋಷ್‌ ಕೂಡಾ ಮಾತನಾಡಿ, ಜಲಾಶಯ ಸುರಕ್ಷಿತವಾಗಿದೆ. ತಡೆಗೋಡೆ ಬಿರುಕು ಬಿಟ್ಟಿರುವುದನ್ನು ದುರಸ್ತಿ ಮಾಡುತ್ತೇವೆ. ಜಲಾಶಯದ ಗೇಟ್‌ ಬಳಿ ನಿಂತಿರುವ ಜಲ ಸಸ್ಯರಾಶಿಯನ್ನು ಶಾಸಕರೇ ಇಟಾಚಿ ತರಿಸಿ ತೆರವು ಮಾಡಿಸುವ ಕೆಲಸ ಮಾಡಿಸುತ್ತಿದ್ದಾರೆ.

ಈ ಕೆಲಸ ಮಾಡಿಸಲು ತಕ್ಷಣಕ್ಕೆ ನಮ್ಮ ಬಳಿ ಅನುದಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

3 ದಿನಗಳಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ ಹಿಂದಿನಿಂದ ಸಸ್ಯರಾಶಿ ಹರಿದು ಬಂದು ನಿಲ್ಲುತ್ತಿದೆ. ಇದನ್ನು ಪೂರ್ತಿಯಾಗಿ ತೆಗೆಯಲು ಇನ್ನೂ ಒಂದು ವಾರ ಸಮಯ ಬೇಕಾಗಬಹುದೆಂದು ಎಇಇ ಸಂತೋಷ್‌ ತಿಳಿಸಿದರು. 

ಸಂಕ್ಲೀಪುರ ಗ್ರಾಮದ ಜಿ.ಎಂ. ನಿಂಗಪ್ಪ ಅವರು, ಶಾಸಕ ರಾಮಪ್ಪನವರು ಈ ಭಾಗದ ರೈತರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡಿಸುತ್ತಿರುವುದರಿಂದ ನಮ್ಮ ಬೆಳೆಗಳು ಉಳಿದುಕೊಂಡಿವೆ ಎಂದರು.

ಇದೇ ಸಂದರ್ಭದಲ್ಲಿ ದಿನಗೂಲಿ ನೌಕರರು 5 ತಿಂಗಳ ಬಾಕಿ ವೇತನ ಕೊಡಿಸುವಂತೆ ಶಾಸಕ ರಾಮಪ್ಪ ಅವರ ಕಾಲು ಹಿಡಿದರು. ಆಗ ಶಾಸಕರು ಸ್ಥಳದಲ್ಲಿದ್ದ ಇಇ ಚಿದಂಬರ್‌ಲಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡು, ಕಳೆದ ಒಂದು ತಿಂಗಳಿನಿಂದ ನೀವು ಇವರಿಗೆ ವೇತನ ಕೊಡಿಸಲು ಸತಾಯಿಸುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಮಧ್ಯ ಪ್ರವೇಶಿಸಿದ ಭದ್ರಾ ಚಂದ್ರಹಾಸ್‌ ಅವರು, ತಕ್ಷಣಕ್ಕೆ ಎಸ್‌ಇ ಅವರಿಗೆ ಸ್ವಲ್ಪ ವೇತನ ನೀಡಲು ಸೂಚಿಸಿ ಸಮಾಧಾನ ಪಡಿಸಿದರು. 

ಎಪಿಎಂಸಿ ಅಧ್ಯಕ್ಷ ಜಿ. ಮಂಜನಾಥ್‌ ಪಟೇಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್‌, ಕೆ.ಪಿ. ಗಂಗಾಧರ್‌, ಎ. ಆರೀಫ್‌ ಅಲಿ, ದಾದಾವಲಿ, ಗ್ರಾಮದ ಶೇಖರಪ್ಪ, ಮಹೇಶ್ವರಪ್ಪ, ಸಂಕ್ಲೀಪುರದ ಸೋಮಶೇಖರ್‌ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

ಡಿಸಿ ಭೇಟಿ : ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ಬುಧವಾರ ಸಂಜೆ ಜಲಾಶಯಕ್ಕೆ ಭೇಟಿ ನೀಡಿ ಜಲಸಸ್ಯ ರಾಶಿ ತೆರವು ಕಾಮಗಾರಿ ಹಾಗೂ ತಡೆಗೋಡೆ ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿ, ನೀರಾವರಿ ಇಲಾಖೆಯ ಇಂಜಿನಿಯರ್ ಜೊತೆ ಚರ್ಚಿಸಿದರು.

Leave a Reply

Your email address will not be published.