ಜಗಳೂರು ತಾ.ನಲ್ಲಿ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿ : 30 ಮನೆಗಳು ಕುಸಿತ

ಜಗಳೂರು ತಾ.ನಲ್ಲಿ ಮಳೆಯಿಂದ ಸಾವಿರಾರು ಎಕರೆ ಬೆಳೆ ಹಾನಿ : 30 ಮನೆಗಳು ಕುಸಿತ

ಜಗಳೂರು, ನ.24- ಇತ್ತೀಚೆಗೆ ಸುರಿದ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿರುವುದಾಗಿ ವರದಿಯಾಗಿದ್ದು, ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷಾ ಕಾರ್ಯ ಕೈಗೊಂಡಿದ್ದಾರೆ.

ಪಟ್ಟಣದಲ್ಲಿ ಸುಮಾರು 30ಕ್ಕೂ ಹೆಚ್ಚು ಮನೆ ಗಳು ಕುಸಿದಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಪ.ಪಂ ಅಧ್ಯಕ್ಷ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ತಾಲ್ಲೂಕಿನಲ್ಲಿ ನವೆಂಬರ್ ಅಂತ್ಯದ ವೇಳೆಗೆ ವಾಡಿಕೆ ಮಳೆ 515ಮಿ.ಮೀ ಪೈಕಿ  ವಾಸ್ತವಿಕ ಮಳೆ 699ಮಿ.ಮೀ. ಸುರಿದಿದೆ. ಕೆರೆ-ಕಟ್ಟೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಆದರೆ ತಾಲ್ಲೂಕಿನ ಯಾವುದೇ ಕೆರೆಗಳು ಭರ್ತಿಯಾಗಿಲ್ಲ. ಆದರೆ ರೈತರ ಬೆಳೆಗಳಿಗೆ ತೀವ್ರ ಹಾನಿ ಉಂಟಾಗಿದೆ.

ಸುಮಾರು 870 ಹೆಕ್ಟೇರ್ ಮೆಕ್ಕೆಜೋಳ, ರಾಗಿ ಸುಮಾರು 50 ಹೆ., ಶೇಂಗಾ 470 ಹೆ. ಮತ್ತು  ಕಡಲೆ 85 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಸೊಕ್ಕೆ ಮತ್ತು ಕಸಬಾ ಹೋಬಳಿಗಳಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಸಾಕಷ್ಟು ಹಾನಿ ಉಂಟಾಗಿದೆ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರಾಗಿ ಮತ್ತು ಕಡಲೆ ಹಾಗೂ ಶೇಂಗಾ ಬೆಳೆಗಳಿಗೆ ಹಾನಿ ಉಂಟಾಗಿದೆ. ಕಸಬಾ ಹೋಬಳಿ ತೊರೆ ಸಾಲು ಗ್ರಾಮಗಳಲ್ಲಿ ಕಡಲೆಗೆ ಹೆಚ್ಚಿನ ನಷ್ಟ ಉಂಟಾಗಿದ್ದು ರೈತರು ಆತಂಕಗೊಂಡಿದ್ದಾರೆ.

ಈರುಳ್ಳಿ ಬೆಳೆ ಸಂಪೂರ್ಣ ನಾಶ: ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ  ಈವರೆಗೂ 2600 ಹೆಕ್ಟೇರ್ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ  ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತರ ಕಣ್ಣಲ್ಲಿ ನೀರು ತರಿಸಿದೆ.

ತರಕಾರಿ ಬೆಲೆ ಗಗನಕ್ಕೆ: ಮಳೆಯಿಂದಾಗಿ ಮಾರುಕಟ್ಟೆಗೆ ಗ್ರಾಮೀಣ ಪ್ರದೇಶಗಳಿಂದ ತರಕಾರಿ ಬಾರದೇ ಇರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಪ್ರತಿ ಕೆ.ಜಿ.ಗೆ ಟೊಮ್ಯಾಟೋ 100 ರೂ. ಈರುಳ್ಳಿ 50 ರೂ. ಹಸಿ ಮೆಣಸಿನಕಾಯಿ 40 ರೂ., ಕ್ಯಾರೆಟ್ ಮತ್ತು ಬೀನ್ಸ್ 70 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ.

Leave a Reply

Your email address will not be published.