ಕನಕ ಎಂಬ ಹೆಸರಿನಲ್ಲಿ ಅಗಾಧ ಶಕ್ತಿ

ಕನಕ ಎಂಬ ಹೆಸರಿನಲ್ಲಿ ಅಗಾಧ ಶಕ್ತಿ

ಹರಿಹರದ ಕನಕ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ವಿಶ್ಲೇಷಣೆ

ಹರಿಹರ, ನ. 22- ದಾಸ ಶ್ರೇಷ್ಠ ಕನಕದಾಸರು ಸರ್ವ ಜನಾಂಗದ ಒಳಿತಿಗಾಗಿ ಅನೇಕ ಕೀರ್ತನೆ ಗಳನ್ನು ರಚಿಸಿ ಸಮಾಜದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಹೋಗಬೇಕು ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

ನಾಡಿನ ಒಳಿತಿಗಾಗಿ ಅನೇಕ ದಾರ್ಶನಿಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಕನಕದಾಸರು 15-16ನೇ ಶತಮಾನದಲ್ಲಿ ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರು ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರ, ನಳಚರಿತ್ರೆ ಮುಂತಾದ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿ ಸಮಾನತೆಯ ತತ್ವ ಸಾರಿದ ಮಹಾನ್ ಪುರುಷರು. ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.

ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ ಮಾತನಾಡಿ, ಕನಕದಾಸರು ಪ್ರತಿಯೊಬ್ಬರನ್ನೂ ಪ್ರೀತಿ, ವಾತ್ಸಲ್ಯದಿಂದ ಕಾಣುವ ಹಾಗೂ ಸಮಾಜ ದಲ್ಲಿ ಅನ್ಯೋನ್ಯ ಭಾವನೆ ತಂದು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕನಕ ಎಂಬ ಹೆಸರಿನಲ್ಲಿ ಅಗಾಧ ಶಕ್ತಿ ಇದೆ. ಹಾಗಾಗಿ ಅವರು ಜನರಿಗೆ ಭಕ್ತಿಯ ಶಕ್ತಿ ತೋರಿಸಿದರು ಎಂದರು. 

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಪ್ರೊಬೇಷನರಿ ಡಿವೈಎಸ್ಪಿ ಭೂತೇಗೌಡ್ರು, ಸಮಾಜ ಕಲ್ಯಾಣ ಇಲಾಖೆಯ ನಾಸಿರ್ ಹುಸೇನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನುಸ್ರತ್ ಪರ್ವೀನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ಮಲ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕರಾದ ರೇಖಾ, ಕೃಷಿ ಇಲಾಖೆಯ ಅಧಿಕಾರಿ ನಾಗನಗೌಡ, ಕುರುಬ ಸಮಾಜದ ಕೆ.ಬಿ. ಬಸವರಾಜಪ್ಪ, ಗುತ್ಯಪ್ಪ, ಲಕ್ಷ್ಮಣ, ಷಣ್ಮುಖ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.