ಕಾರ್ತಿಕ ಮಾಸ ಮುಗಿಯುವವರೆಗೂ ಮಳೆ : ಕೋಡಿಮಠ ಶ್ರೀಗಳ ಭವಿಷ್ಯ

ಧಾರವಾಡ, ನ.21 – ರಾಜ್ಯದಲ್ಲಿ ವರುಣನ ರುದ್ರನರ್ತನಕ್ಕೆ ಜನಜೀವನ ತತ್ತರಿಸಿ ಹೋಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರೈತರ ಬೆಳೆಗಳು, ರಸ್ತೆ, ಮನೆಗಳು ಸಂಪೂರ್ಣ ಹಾನಿ ಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಭಾರೀ ಮಳೆ, ಚಳಿಗೆ ಹೈರಾಣಾಗಿರುವ ಜನತೆ, ಸಾಕಪ್ಪ ಸಾಕು ಈ ಮಳೆ ಸಹವಾಸ ಎನ್ನುತ್ತಿದ್ದಾರೆ. ಚಂಡಮಾರುತದ ಪ್ರಭಾವದಿಂದ ನವೆಂಬರ್ ತಿಂಗಳಲ್ಲಿ ದಶಕದಲ್ಲೇ ಕಂಡು ಕೇಳರಿಯದ ಮಳೆ ಸುರಿದಿದ್ದು ಜನ ಕಂಗೆಟ್ಟಿದ್ದಾರೆ. ಇನ್ನು ಎಷ್ಟು ದಿನಗಳ ಕಾಲ ಈ ಮಳೆರಾಯ ಕಾಟ ಕೊಡಲಿದ್ದಾನೆ ಎಂಬುದಕ್ಕೆ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯ ಇದೀಗ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಈ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ‘ರಾಜ್ಯದಲ್ಲಿ ಇನ್ನೂ ಮಳೆ ಕಾಟ ಇದೆ. ಇಷ್ಟಕ್ಕೆ ನಿಲ್ಲಲ್ಲ. ಕಾರ್ತಿಕ ಮಾಸ ಮುಗಿಯುವವರೆಗೆ ಮಳೆ ನಿಲ್ಲುವುದಿಲ್ಲ. ಮಳೆ ಇನ್ನೂ ಹೆಚ್ಚಳವಾಗುವ ಲಕ್ಷಣ ಇದೆ. ಸದ್ಯ ಪ್ರಕೃತಿ ವಿಕೋಪವಾಗಿದೆ. ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಹಾಗೆಯೇ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತದೆ’ ಎಂದರು.