ಮನುಷ್ಯನ ಅಂತರಂಗ ಶುದ್ಧಿಗಾಗಿ ಬೇಕು ದೇವಸ್ಥಾನಗಳು

ಮನುಷ್ಯನ ಅಂತರಂಗ ಶುದ್ಧಿಗಾಗಿ ಬೇಕು ದೇವಸ್ಥಾನಗಳು

ದಾವಣಗೆರೆ, ನ.17-  ದಾನವನನ್ನು ಮಾನವನನ್ನಾಗಿ, ಮಾನವನನ್ನು ಮಹಾದೇವ ನನ್ನಾಗಿ ವ್ಯಕ್ತಿತ್ವ ವಿಕಸನಗೊಳಿಸಲು ಭಗವಂತನ ಆರಾಧನೆ ಬೇಕು. ಅದಕ್ಕಾಗಿ ಗ್ರಾಮಗಳಲ್ಲಿ ದೇವಸ್ಥಾನಗಳು ಇರಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಮಹೇಶ್ವರ ಸ್ವಾಮಿ, ಶ್ರೀ ನಂದೀಶ್ವರ ಸ್ವಾಮಿ ಶಿಲಾಮೂರ್ತಿ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಶಿಕ್ಷಣಕ್ಕೆ ಶಾಲೆ, ಆರೋಗ್ಯಕ್ಕೆ ಆಸ್ಪತ್ರೆ, ಜನ-ಜಾನುವಾರಗಳಿಗೆ ಕೆರೆ-ಹಳ್ಳಗಳು ಇರುವಂತೆ ಭಗವಂತನ ಸಾನ್ನಿಧ್ಯಕ್ಕೆ ದೇವಸ್ಥಾನಗಳು ಅತ್ಯಗತ್ಯ. ಮನುಷ್ಯನ ಅಂತರಂಗ ಶುದ್ಧಿಯಲ್ಲಿ ದೇವಸ್ಥಾನದ ಪಾತ್ರ ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಇಂತಹ ದೇವಸ್ಥಾನಗಳಲ್ಲಿ ದೇವರನ್ನು ಪ್ರಾರ್ಥಿಸಿ ಅಂತರಂಗದ ಜ್ಞಾನದ ಅರಿವು ಹೆಚ್ಚಿಸುತ್ತಾ, ಭಗವಂತನಿಗೆ ಪ್ರಿಯವಾಗುವ ಬದುಕು ಕಟ್ಟಿಕೊಳ್ಳಬೇಕು ಎಂದು ನುಡಿದರು.

ಮಾನವನ ಭೌತಿಕ ಬದುಕು ದೇವರಿಗೆ ಪ್ರೀತಿಯಾಗಬೇಕಾದರೆ ಪರರನ್ನು ದ್ವೇಷಿಸುವು ದನ್ನು ಬಿಡಬೇಕು. ಕೈ ಒಡ್ಡಿ ಬೇಡದೆ ಕಾಯಕದಲ್ಲಿ ನಿಷ್ಟೆಯನ್ನಿಟ್ಟುಕೊಂಡು ದುಡಿಯಬೇಕು. ಬಂದ ಸಂಪತ್ತಿನಲ್ಲಿ ದೇಹಿ ಎಂದು ಬಂದವರಿಗೆ ಕೈ ಎತ್ತಿ ದಾನ ಮಾಡಬೇಕು. ದೀನರು, ದುರ್ಬಲರು, ಅಸಹಾಯಕರಿಗೆ ನೆರವಾಗಬೇಕು. ಧರ್ಮದಲ್ಲಿ ನಂಬಿಕೆ ಇಡಬೇಕು. ಹೆತ್ತವರನ್ನು, ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದರು.

ಯಾರಿಗೂ ತೊಂದರೆ ನೀಡದೆ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ, ಸಜ್ಜನನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ಭಕ್ತಿ ಮಾರ್ಗದಲ್ಲಿ ಸಾಗಿದಾಗ ವ್ಯಕ್ತಿ ಸಮಾಜಕ್ಕೆ ಬೇಕಾಗುತ್ತಾನೆ. ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುತ್ತಾನೆ ಎಂಬಂತೆ ಭಗವಂತನಿಗೆ ಪ್ರಿಯನಾಗುತ್ತಾನೆ ಎಂದು ಶ್ರೀಗಳು ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಹಾಗೂ ಶ್ರೀ ನಂದೀಶ್ವರ ಸ್ವಾಮಿ ಮೂರ್ತಿ ತಯಾರಕರು ಹಾಗೂ ಗ್ರಾಮದ ಹಿರಿಯರು ಗುರು ರಕ್ಷೆ ಪಡೆದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಎ.ಕೆ. ಗಂಗಮ್ಮ, ಸದಸ್ಯರಾದ ಗೀತಾ, ಗಣೇಶ್, ಬಸವರಾಜಪ್ಪ ಕೂಲಂಬಿ, ಗ್ರಾಮದ ಮುಖಂಡರುಗಳಾದ ಸತ್ತೂರು ನಿಂಗಪ್ಪ, ಕೆ.ಎನ್. ಬಸವರಾಜಪ್ಪ, ಎಂ.ಆರ್. ಶಿವಾನಂದಯ್ಯ, ಚನ್ನವೀರಪ್ಪ, ಮಲ್ಲಿಕಾರ್ಜುನ್, ಎಂ.ಉಮಾಪತಿ,  ಕೆ.ಎಸ್. ವೀರೇಶ್ ಇತರರು ಉಪಸ್ಥಿತರಿದ್ದರು. ಶಿಕ್ಷಕ ಕೆ.ಆರ್. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದಲಿಂಗಸ್ವಾಮಿ ಹಿರೇಮಠ್ ಅತಿಥಿಗಳನ್ನು ಸ್ವಾಗತಿಸಿದರು. ಜಗದೀಶ್ ವಂದಿಸಿದರು.