ಶಿವಮೊಗ್ಗ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ

ಶಿವಮೊಗ್ಗ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ

ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ತೆರೆ, ಯಶಸ್ವಿಯಾದ ದೇವನಗರಿ ಆತಿಥ್ಯ

ದಾವಣಗೆರೆ, ಅ.24- ನಗರದಲ್ಲಿ ಮೂರು ದಿನಗಳ ಕಾಲ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಇಂದು ಅಂತಿಮ ತೆರೆ ಕಂಡಿತು.

ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ನಗರದ ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ  ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು, ಸರ್ಕಾರಿ ನೌಕರರಿಗೆ ಕೇರಳ ಮಾದರಿಯ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ ತಿಂಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ಬೇರೆ ಕಡೆಗಳಲ್ಲಿ ನಡೆದ ಕ್ರೀಡಾಕೂಟಗಳಿಗಿಂತ ದಾವಣಗೆಯಲ್ಲಿಯೇ ಅತ್ಯಂತ ಯಶಸ್ಸು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಮಟ್ಟದ ಹಾಗೂ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ರಾಜ್ಯಮಟ್ಟದ ಮತ್ತೊಂದು ಕ್ರೀಡಾಕೂಟ ಆಯೋಜಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

2022 ರಲ್ಲಿ ಹೊಸ ವೇತನ ಪಡೆಯುವ ನಿಟ್ಟಿನಲ್ಲಿ ಚಳವಳಿ ರೂಪಿಸಲಾಗಿದ್ದು, ಶಿಕ್ಷಕರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವೆಂಬರ್ ತಿಂಗಳಲ್ಲಿ ಪ್ರತ್ಯೇಕ ಹೋರಾಟ ನಡೆಸಲಾಗುವುದು ಎಂದರು.

ಖಾಲಿ ಇರುವ ಎರಡು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದರು.

ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ಪರಿಹರಿಸುವ ನಿಟ್ಟಿನಲ್ಲಿ ಸಂಘ ಪ್ರಮಾಣಿಕ ಪ್ರಯತ್ನ ಮಾಡಬೇಕು. ಇದರಿಂದ ಪೊಲೀಸ್ ಸಿಬ್ಬಂದಿಗೂ ಅನುಕೂಲವಾಗಲಿದೆ ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ಗಿರೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.