ಅಂತರಂಗದ ಶತ್ರುಗಳ ಮೇಲೆ ವಿಜಯ ಸಾಧಿಸಬೇಕಿದೆ : ಓಂಕಾರ ಶಿವಾಚಾರ್ಯ ಶ್ರೀ

ಅಂತರಂಗದ ಶತ್ರುಗಳ ಮೇಲೆ ವಿಜಯ ಸಾಧಿಸಬೇಕಿದೆ : ಓಂಕಾರ ಶಿವಾಚಾರ್ಯ ಶ್ರೀ

ದಾವಣಗೆರೆ, ಅ.8-ನಗರದ ಪಿ.ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ನಿನ್ನೆ ದುರ್ಗಾದೇವಿ ವಿಗ್ರಹ, ಘಟ ಸ್ಥಾಪನೆ ನೆರವೇರಿತು. 

ಇದಕ್ಕೂ ಮುನ್ನ ನಿಟುವಳ್ಳಿ ಶ್ರೀ ದುರ್ಗಾಂ ಬಿಕಾ ದೇವಿ ದೇವಸ್ಥಾನ ದಿಂದ ಬೀರಲಿಂಗೇಶ್ವರ ದೇವಸ್ಥಾನದ ಆವರಣದವರೆಗೆ ಶ್ರೀ ದುರ್ಗಾದೇವಿ ವಿಗ್ರಹವನ್ನು ಜಾನಪದ ಕಲಾ ತಂಡ ಗಳೊಂದಿಗೆ ನಡೆದ ಮೆರವಣಿಗೆಯೊಂದಿಗೆ ತರಲಾಯಿತು.

ಘಟಸ್ಥಾಪನೆಯ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶೀ ರ್ವಚನ ನೀಡುತ್ತಾ, ದುಷ್ಟ ಶಕ್ತಿಗಳ ದಮನದ ಸಂಕೇತವೇ ದಸರಾ ಹಬ್ಬ ಎಂದು ವಿಶ್ಲೇಷಿಸಿದರು.

ಲಲಿತಕಲೆಗಳೂ ಸೇರಿ ನಮ್ಮ ಸಂಸ್ಕೃತಿ, ಸಾಹಿತ್ಯದ ಅಭಿವ್ಯಕ್ತಿಗೆ ಈ ನಾಡಹಬ್ಬವು ವೇದಿಕೆ ಒದಗಿಸುತ್ತದೆ. ಶಕ್ತಿ ಮಾತೆಯಾದ ನವದುರ್ಗೆ ಯನ್ನು ಭಕ್ತರ ಮನೆ, ಮಠ, ಮಂದಿರಗಳಲ್ಲಿ ಆರಾಧಿಸಲಾಗುತ್ತದೆ ಎಂದು ಹೇಳಿದರು.

ಶ್ರದ್ಧಾ-ಭಕ್ತಿಯಿಂದ ಆಚರಿಸುವ ವಿಜಯದಶ ಮಿಯು ಕರ್ನಾಟಕದಲ್ಲಿ ರಾಜ-ಮಹಾರಾಜ ರಿಂದ ವೈಭವಯುತವಾಗಿ ಆಚರಿಸಲ್ಪಟ್ಟು ನಾಡಹಬ್ಬವೆಂದೇ ಹೆಸರಾಗಿರುವುದು ಇದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಮನುಷ್ಯನಲ್ಲಿರುವ  ಅಂತರಂಗದ ಶತ್ರುಗಳ ಮೇಲೆ ಮೊದಲು ವಿಜಯ ಸಾಧಿಸಬೇಕಿದೆ. ದುಷ್ಟ ಶಕ್ತಿಗಳ ಮೇಲೆ ಜಯ ಸಾಧಿಸಿದ ದುರ್ಗಾದೇವಿಯನ್ನು ನವರಾತ್ರಿ ಸಂದರ್ಭದಲ್ಲಿ 9 ದಿನಗಳ ಕಾಲ ಪೂಜಿಸುವುದೂ ಕೂಡ ಇದೇ ಆಶಯ ಹೊಂದಿದೆ ಎಂದು ಹೇಳಿದರು.

ದೇಶದ ಗಡಿಯಲ್ಲಿ ಹಿಂಸಾತ್ಮಕ ಚಟುವಟಿಕೆ ಗಳು ನಡೆಯುತ್ತಿದ್ದು, ಅಂತಹ ರಾಕ್ಷಸಿ ಪ್ರವೃತ್ತಿಗಳ ಅಂತ್ಯವಾಗಬೇಕಿದೆ. ದುಷ್ಟ ಶಕ್ತಿಗಳ ನಿಗ್ರಹವಾಗಿ ಶಾಂತಿ ನೆಲೆಸಬೇಕಿದೆ. ನಮ್ಮ ಕಷ್ಟಗಳನ್ನು ನೀಗಿಸಿ ಸುಭಿಕ್ಷೆಯನ್ನು ಕರುಣಿಸುವಂತೆ ನಾವೆಲ್ಲರೂ ದೇವಿಯನ್ನು ಪ್ರಾರ್ಥಿಸೋಣ ಎಂದರು. ಪುರಾಣ ಕಾಲದಲ್ಲಿ ದೇವಿಯು ರಾಕ್ಷಸರ ಸಂಹಾರ ಮಾಡಿದ ಬಗ್ಗೆ ಕೇಳಿದ್ದೇವೆ. ಇಂದಿಗೂ ಜಗತ್ತಿನಲ್ಲಿ ಅಗೋಚರ ಶಕ್ತಿಯಾಗಿ ದೇವಿಯು ನಮ್ಮನ್ನು ಕಾಯುತ್ತಿದ್ದಾಳೆ. ದೇವಿಯ ಅನುಗ್ರಹದಿಂದ ಕೊರೊನಾ ಆತಂಕ ದೂರವಾಗಲಿ ಎಂದು ಆಶಿಸಿದರು.

ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಮಿತಿ ಸಂಚಾಲಕ ಸತೀಶ ಪೂಜಾರಿ, ಸಹ ಸಂಚಾಲಕರಾದ ಎನ್.ರಾಜಶೇಖರ, ರಾಜು ಬೇಕರಿ, ಸದಸ್ಯರಾದ ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್, ತಿಪ್ಪೇಸ್ವಾಮಿ, ಪ್ರಹ್ಲಾದ್ ತೇಲ್ಕರ್, ವಿನಾಯಕ ರಾನಡೆ, ಎಸ್.ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

ದುರ್ಗಾದೇವಿ ಮೂರ್ತಿ ಮೆರವಣಿಗೆಯಲ್ಲಿ ಪಾಲಿಕೆ ಸದಸ್ಯರಾದ ವೀರೇಶ್ ಪೈಲ್ವಾನ್, ಉಮಾ ಪ್ರಕಾಶ್ ಇತರರು ಭಾಗವಹಿಸಿದ್ದರು.