ಪದವಿ ಪ್ರವೇಶ ಶುಲ್ಕ ಕಡಿಮೆ ಮಾಡಿ

ಪದವಿ ಪ್ರವೇಶ ಶುಲ್ಕ ಕಡಿಮೆ ಮಾಡಿ

ಹರಪನಹಳ್ಳಿ, ಸೆ.16- ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿಮೆ ಮಾಡಿ ಪದವಿಗೆ ಸೇರ ಬಯಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಬಸವರಾಜ್ ಹುಲಿಯಪ್ಪನವರ್ ಮಾತನಾಡಿ , ಹರಪನಹಳ್ಳಿ ತಾಲ್ಲೂಕು  ಹಿಂದುಳಿದ ತಾಲ್ಲೂಕಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ದೂರದ ನಗರಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹರಪನಹಳ್ಳಿ ಪಟ್ಟಣದಲ್ಲಿರುವ ಎಲ್ಲಾ ಪದವಿ ಕಾಲೇಜ್‍ಗಳಲ್ಲಿ ಪ್ರವೇಶ ಶುಲ್ಕ ಕಡಿಮೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶಾತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ನಂದೀಶ್ ಆಚಾರಿ ಮಾತನಾಡಿ, ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ತೆರೆಯಬೇಕು ಮತ್ತು ಪ್ರತ್ಯೇಕ ಮಹಿಳಾ ಕಾಲೇಜ್ ಸ್ಥಾಪಿಸಬೇಕು ಹಾಗೂ ಪ್ರತ್ಯೇಕ ಮಹಿಳಾ ವಿದ್ಯಾರ್ಥಿ ನಿಲಯ ನಿರ್ಮಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ್, ಎಚ್.ಬಾಲಾಜಿ, ಕೆ.ತಿರುಮಲ, ಬಸವರಾಜ್, ದೊಡ್ಡಬಸಪ್ಪ, ಕಲ್ಲಹಳ್ಳಿ ರುದ್ರೆಗೌಡ, ದೇವರಾಜ್, ಎಂ. ವಿನೋದ್, ಮೇಘರಾಜ್, ಎಂ.ಪಿ ಬಸವರಾಜ್, ಬೀರೇಶ್  ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.