ಹೋರಾಟ ಪ್ರಜ್ಞೆ ಮರೆಯಾಗಿ, ರಾಜೀ ಪ್ರವೃತ್ತಿ

ಹೋರಾಟ ಪ್ರಜ್ಞೆ ಮರೆಯಾಗಿ, ರಾಜೀ ಪ್ರವೃತ್ತಿ

ಇಂಧನ ಬೆಲೆ ಏರಿಕೆ, ರೈತರ ಇಳುವರಿ ಬೆಲೆ ಇಳಿದರೂ ಕೇಳದ ಮನಸ್ಥಿತಿ ಬಗ್ಗೆ ಸಾಣೇಹಳ್ಳಿ ಶ್ರೀ ಬೇಸರ

ಆನಗೋಡಿನ ರೈತ ಹುತಾತ್ಮರ ದಿನಾಚರಣೆ

ದಾವಣಗೆರೆ, ಸೆ. 13 – ಜನರಲ್ಲಿ ಹೋರಾಟ ಪ್ರಜ್ಞೆ ಮರೆಯಾಗಿರುವುದರಿಂದ ಪೆಟ್ರೋಲ್ – ಡೀಸೆಲ್ ದರ ಏರಿ, ರೈತರ ಇಳುವರಿ ಬೆಲೆ ಇಳಿದರೂ ಕೇಳುವ ಮನಸ್ಥಿತಿ ಇಲ್ಲ ಎಂದು ಸಾಣೇಹಳ್ಳಿ ಶ್ರೀಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದ್ದಾರೆ.

ಸಮೀಪದ ಆನಗೋಡಿನಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ದನೂರು ನಾಗರಾಜಾಚಾರ್ ಅವರ 29ನೇ ವರ್ಷದ ರೈತ ಹುತಾತ್ಮರ ದಿನಾಚರಣೆಯ ಸಾನ್ನಿಧ್ಯ ವಹಿಸಿ, ಅವರು ಮಾತನಾಡುತ್ತಿದ್ದರು.

ಹೋರಾಟ ಪ್ರಜ್ಞೆ ನಮ್ಮಿಂದ ಮರೆಯಾಗಿದೆ. ಏನೇ ಅನಿಷ್ಟಗಳು ನಡೆದರೂ ರಾಜೀ ಮಾಡಿಕೊಳ್ಳುವ ಕೆಟ್ಟ ಪ್ರವೃತ್ತಿ ಬೆಳೆಯುತ್ತಿದೆ. ಸಮಾಜದಲ್ಲಿ ಏನೇ ಅನ್ಯಾಯ, ದೋಷ ಕಂಡರೂ ನೇರವಾಗಿ ಪ್ರತಿಭಟಿಸುವ ಮನೋಭಾವ ಮೈಗೂ ಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಶ್ರೀಗಳು ಹೇಳಿದರು.

ಅನ್ಯಾಯದ ವಿರುದ್ಧ ಸಮೂಹ ಸೇರಿಕೊಂಡು ಹೋರಾಟ ಮಾಡುವುದು ಲಿಂಗಾಯತ ಧರ್ಮದ ಗಣಾಚಾರವಾಗಿದೆ. ಅಂತಹ ಗಣಾಚಾರದಿಂದ ನಮ್ಮ ಸೌಲಭ್ಯಗಳನ್ನು ನಾವೇ ಪಡೆಯಲು ಅವಕಾಶ ವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, 22 ಕೆರೆಗಳಿಗೆ ನೀರು ಹರಿಸುವ ಯೋಜನೆ ಕಾಮಗಾರಿ ಕಳಪೆ ಆಗಿ ರಿಪೇರಿಗೆ ವರ್ಷಗಳಿಂದ ಹಣ ಹೋಗುತ್ತಿದೆ. ಈ ಬಗ್ಗೆ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸ ಗೌಡರ್ ಮಾತನಾಡಿ, ರೈತರು ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಕೇವಲ ಪ್ರತಿಕ್ರಿಯೆ ನೀಡಿದರೆ ಸಾಲದು, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್ ಗಿರೀಶ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಸಾಫ್ಟ್‌ವೇರ್‌ ರೀತಿಯ ಉದ್ಯಮಗಳು ಕುಸಿದಿವೆ. ಆದರೆ, ರೈತರು ಮಾತ್ರ ತಮ್ಮ ಮನೋಧರ್ಮ ಹಾಗೂ ಮನೋಸ್ಥೈರ್ಯದಿಂದ ಕೊರೊನಾ ಸಂದರ್ಭದಲ್ಲೂ ಗಟ್ಟಿಯಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಸ್ಮಾರಕ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜನಾಯ್ಕ, ರೈತ ಮುಖಂಡರಾದ ಹೆಚ್.ಆರ್. ಲಿಂಗರಾಜು, ಕೆ.ಪಿ. ಕಲ್ಲಿಂಗಪ್ಪ, ಆವರಗೆರೆ ರುದ್ರಮುನಿ, ಹೆದ್ನೆ ಮುರಿಗೆಣ್ಣ, ಕೆ.ಎಸ್. ಬಸವಂತಪ್ಪ, ಮುಖಂಡರಾದ ಬೆಳವನೂರು ನಾಗರಾಜಪ್ಪ, ಹೊನ್ನೂರು ಮುನಿಯಪ್ಪ, ಬುಳ್ಳಾಪುರದ ಹನುಮಂತಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ, ವರ್ತಕರಾದ ಕುಸುಮಶೆಟ್ರು, ಜಾವೀದ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.