ಮನೆಯ ಬಾಗಿಲಿಗೆ ನಿಮ್ಮ ಸೇವಕ

ಮನೆಯ ಬಾಗಿಲಿಗೆ ನಿಮ್ಮ ಸೇವಕ

ದಾವಣಗೆರೆ, ಆ.30- ಮಹಾ ನಗರ ಪಾಲಿಕೆಯ 38ನೇ ವಾರ್ಡ್‌ನ ಪಾಲಿಕೆ ಸದಸ್ಯ ಜಿ.ಎಸ್.ಮಂಜು ನಾಥ್ ಗಡಿಗುಡಾಳ್ ಅವರು ನಗರದ ಎಂಸಿಸಿ `ಬಿ’ ಬ್ಲಾಕ್‌ನ 5ನೇ ಮುಖ್ಯರಸ್ತೆ ಇತರೆ ಭಾಗದಲ್ಲಿ `ಮನೆಯ ಬಾಗಿಲಿಗೆ ನಿಮ್ಮ ಸೇವಕ’ ವಿಶೇಷ ಕಾರ್ಯಕ್ರಮದಡಿ ಸಾರ್ವಜನಿಕರ ಅಹವಾಲು, ಸಮಸ್ಯೆ ಆಲಿಸಿದರು.

ಮಂಜುನಾಥ್ ಅವರು ಕಳೆದ ಕೆಲವು ವಾರಗಳ ಹಿಂದೆ `ಮನೆಯ ಬಾಗಿಲಿಗೆ ನಿಮ್ಮ ಸೇವಕ’ ಕಾರ್ಯಕ್ರಮ ಪ್ರಾರಂಭಿಸಿದ್ದರು. ಪ್ರತಿ ಭಾನುವಾರ ವಾರ್ಡ್‌ನ ನಾಗರಿಕರ ಮನೆಯ ಬಾಗಿಲಿಗೆ ತೆರಳಿ ಅವರ ಸಮಸ್ಯೆ, ಆಗಬೇಕಾಗಿ ರುವ ಕೆಲಸಗಳ ಬಗ್ಗೆ ಖುದ್ದು ಮಾಹಿತಿ ಪಡೆಯುತ್ತಿದ್ದು, ಸಮಸ್ಯೆಗಳನ್ನು ನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಈವರೆಗೆ 500 ಕ್ಕೂ ಹೆಚ್ಚು ಜನರ ಭೇಟಿ ಮಾಡಿ, ಸಮಸ್ಯೆ ಆಲಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ತಮ್ಮ ವಾರ್ಡ್‌ನ ಸದಸ್ಯ ಈ ಕಾರ್ಯಕ್ರಮದ ಮೂಲಕ ಮನೆಯ ಬಾಗಿಲಿಗೆ ಬಂದು ಸಮಸ್ಯೆ ಕೇಳಿ, ಪರಿಹಾರಕ್ಕ ಮುಂದಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ನಗರ ಪಾಲಿಕೆ ಸದಸ್ಯರೊಬ್ಬರು ವಿಶೇಷ ಕಾರ್ಯಕ್ರಮದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆೆ.