ಜನಸ್ಪಂದನಾ ಸಭೆ : ಸರತಿಯಲ್ಲಿ ಅಹವಾಲು ಸಲ್ಲಿಸಿದ ಮುಖಂಡರು

ಜನಸ್ಪಂದನಾ ಸಭೆ : ಸರತಿಯಲ್ಲಿ ಅಹವಾಲು ಸಲ್ಲಿಸಿದ ಮುಖಂಡರು

 ಹರಪನಹಳ್ಳಿ, ಆ.26- ವಿಶೇಷ ಜನಸ್ಪಂದನಾ ಸಭೆ ಮತ್ತು ಕುಂದುಕೊರತೆ ಸಭೆ ವೇಳೆ ಸಾರ್ವಜನಿಕರಂತೆ ಬಿಜೆಪಿಯ ಮುಖಂಡರು ಕೂಡ ಸರತಿ ಸಾಲಿನಲ್ಲಿ ಕುಳಿತು ಅಹವಾಲು ಸಲ್ಲಿಸಿದ ಪ್ರಸಂಗ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಬಾಬು ಜಗಜೀವನ್‍ರಾಮ್ ಭವನದಲ್ಲಿ ನಡೆದಿದೆ.

ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ  ನಿಟ್ಟೂರು ಸಣ್ಣ ಹಾಲಪ್ಪ ಅವರು, ಕಳೆದ ಎರಡು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ಮನೆಗಳಿಗೆ ಅಕ್ರಮ ಸಕ್ರಮದಲ್ಲಿ ಹಕ್ಕುಪತ್ರ ನೀಡಿದ್ದು, ಇದುವರೆಗೂ ಫಲಾನುಭವಿಗಳಿಗೆ ಖಾತೆ ನೀಡಿಲ್ಲ ಎಂದು ದೂರು ನೀಡಿದಾಗ, ತೊಡಕುಗಳನ್ನು ಸರಿಪಡಿಸುವಂತೆ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.

ಬೆಣ್ಣಿಹಳ್ಳಿ ಕರೇಗೌಡ ಮಾತನಾಡಿ, ನಾಡಕಛೇರಿಯಲ್ಲಿ ಗಣಕಯಂತ್ರ ನಿರ್ವಾಹಕರು ಜಮೀನಿಗೆ ಸಂಬಂಧಿಸಿದ ನಕಾಶೆ ತೆಗೆದು ಕೊಡಲು ಹದಿನೈದು ನೂರರಿಂದ ಎರಡು ಸಾವಿರದವರೆಗೆ ಹಣ ಕೇಳುತ್ತಾರೆ ಎಂದು ದೂರಿದರು. ಬಾಗಳಿ ಕೊಟ್ರೇಶಪ್ಪನವರು ಬಾಗಳಿ ಹಾಗೂ ಕೋಡಿಹಳ್ಳಿ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ದುರಸ್ತಿಯಲ್ಲಿದ್ದರೂ ಇದುವರೆಗೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ ಎಂದರು. ಆಗ ಅಧಿಕಾರಿಗಳ ಮೇಲೆ ಗರಂ ಆದ ಶಾಸಕರು ಕೂಡಲೇ ಸರಿಪಡಿಸುವಂತೆ ತಿಳಿಸಿದರು.

ಕಾವಲಹಳ್ಳಿ,  ತೌಡೂರು  ಭಾಗದ ಅರಣ್ಯ ಭೂಮಿಯಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರಲಾಗಿದೆ. ಆದರೆ ಪಟ್ಟಾ ಕೊಟ್ಟಿಲ್ಲ. ಪಟ್ಟಾ ಕೊಟ್ಟವರಿಗೆ ಪಹಣಿ ಮಾಡಿಕೊಟ್ಟಿಲ್ಲ. ಅವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ವಿವಿಧೆಡೆ ಅನಧಿಕೃತ ಬ್ರಾಂಡಿ ಮಾರಾಟ ನಡೆಯುತ್ತದೆ. ಹಾಗೂ ಓಸಿ, ಮಟ್ಕಾ ಜೂಜಾಟ ನಡೆಯುತ್ತದೆ. ತಡೆಗಟ್ಟಿ ಎಂದು ಗುಡಿಹಳ್ಳಿ ಹಾಲೇಶ್‌ ಒತ್ತಾಯಿಸಿದಾಗ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟವರಿಗೆ  ಶಾಸಕರು ಸೂಚಿಸಿದರು

ಮತ್ತೂರು ಗ್ರಾಮದ ಬಳಿ ಸರ್ಕಾರಿ ಹುಲ್ಲುಗಾವಲಿನಲ್ಲಿ  ಸಾಗುವಳಿ ಭೂಮಿಗೆ ಪಟ್ಟಾ ಕೊಡಿ ಎಂದು ಕೋರಿದಾಗ ತಹಶೀಲ್ದಾರ್ ಎಲ್.ಎಂ. ನಂದೀಶ್‌ ಅವರು  ಹುಲ್ಲುಗಾವಲಿನಲ್ಲಿ  ಪಟ್ಟಾ ಕೊಡಲು ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದರು. ಆಗ ಶಾಸಕ ಕರುಣಾಕರ ರೆಡ್ಡಿಯವರು ಹುಲ್ಲುಗಾವಲಿನಲ್ಲಿ ಅವಕಾಶವಿಲ್ಲದಿದ್ದರೆ, ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿದವರಿಗೆ ಪಟ್ಟಾ, ಪಹಣಿ ನೀಡಿ ಎಂದು ಸೂಚಿಸಿದರು.

ಬಾಗಳಿ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಷಡಾಕ್ಷರಪ್ಪ ಅವರು ತಮಗೆ ನಿವೇಶನ ನೀಡುವಂತೆ ಮನವಿ ಮಾಡಿದ್ದು, ಅವಕಾಶವಿದ್ದರೆ ಕೊಡಿ ಎಂದು ತಹಶೀಲ್ದಾರ್‌ ಅವರಿಗೆ ಶಾಸಕರು ಸೂಚಿಸಿದರು. ಮತ್ತಿಹಳ್ಳಿ, ಸಾಸ್ವಿಹಳ್ಳಿ, ಬಾಗಳಿ ಬಸ್ ಸೌಕರ್ಯ ಕಲ್ಪಿಸಿ ಎಂದು ಆ ಭಾಗದ ಜನರು ಕೇಳಿದರು.  ಆದರ್ಶ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ, ಬಗೆಹರಿಸಿ ಎಂದು ಮನವಿ ಮಾಡಿದರು.

ಕಡತಿ, ಕಂಡಿಕೇರಿ, ವಟ್ಲಹಳ್ಳಿ ಭಾಗದಲ್ಲಿ ಜನ ಸಾಮಾನ್ಯರಿಗೆ ಕೆರೆಯ ಮಣ್ಣನ್ನು  ಒಯ್ಯಲು ಬಿಡುವುದಿಲ್ಲ, ಆದರೆ ಶಾಮನೂರು ಶುಗರ್ಸ್‌ ನವರು    ತೆಗೆದುಕೊಂಡು ಹೋದರೂ ಅಧಿಕಾರಿ ಗಳು ಸುಮ್ಮನಿರುತ್ತಾರೆ ಎಂದು ಜನರು ದೂರಿದರು.

ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ  ಈಗ ಪಟ್ಟಣದಲ್ಲಿ ಮಾತ್ರ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೋವಿಡ್ ಇಳಿಮುಖವಾದ ನಂತರ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ  ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿರಾವ್, ತಹಶೀಲ್ದಾರ್‌ ಎಲ್.ಎಂ.ನಂದೀಶ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್,  ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್‌, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಪ್ರಕಾಶ್, ವಲಯ ಅರಣ್ಯಾಧಿಕಾರಿ ಭರತ್ ತಳವಾರ, ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ, ಬಾಗಳಿ ಕೊಟ್ರೇಶಪ್ಪ, ಆರ್, ಲೋಕೇಶ್‌, ಯು.ಪಿ. ನಾಗರಾಜ ಇನ್ನಿತರರು ಪಾಲ್ಗೊಂಡಿದ್ದರು.