ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ಜರುಗಿಸಲು ಡಿಸಿ ಸೂಚನೆ

ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮ ಜರುಗಿಸಲು ಡಿಸಿ ಸೂಚನೆ

ದಾವಣಗೆರೆ, ಆ. 19- ಬಾಲ್ಯ ವಿವಾಹ ಪ್ರಕರಣಗಳಲ್ಲಿ ಅಧಿಕಾರಿಗಳು ಯಾವುದೇ ಕರುಣೆ, ದಾಕ್ಷಿಣ್ಯ ಅಥವಾ ಪ್ರಭಾವಕ್ಕೆ ಒಳಗಾಗದೆ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‍ನಿಂದ ಈವರೆಗೆ ಒಟ್ಟು 41 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 38 ವಿವಾಹಗಳನ್ನು ತಡೆಯಲಾಗಿದೆ,  3 ಮದುವೆ ಗಳು ನಡೆದಿವೆ.  ಈ ಪೈಕಿ ದಾವಣಗೆರೆ ತಾಲ್ಲೂಕಿ ನಲ್ಲಿ ಮಾತ್ರ 3 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾಹಿತಿ ನೀಡಿದರು.  

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಅಧಿಕಾರಿಗಳು ಪಡೆದ ಮಾಹಿತಿ ಹಾಗೂ ಮಕ್ಕಳ ಸಹಾಯವಾಣಿ ಕಾರಣಗಳಿಂದ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.  ಆದರೆ ಉಳಿದ ತಾಲ್ಲೂಕಿನಲ್ಲಿ ಪ್ರಕರಣಗಳು ದಾಖಲಾಗಿಲ್ಲ ಎಂದರೆ, ಅಲ್ಲಿ ಬಾಲ್ಯ ವಿವಾಹ ನಡೆದಿಲ್ಲ ಎಂದರ್ಥವಲ್ಲ.  ಉಳಿದ ತಾಲ್ಲೂಕುಗಳಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ, ಹೀಗಾಗಿ ಪ್ರಕರಣಗಳು ಕಂಡುಬಂದಿಲ್ಲ ಎಂದರು.

ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ,  ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‍ನಿಂದ ಈವರೆಗೆ 18 ವರ್ಷದೊಳಗಿನ ಒಟ್ಟು 141 ಗರ್ಭಿಣಿಯರ ಮಾಹಿತಿ ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ದಾಖಲಾಗಿದೆ.  ಈ ಪೈಕಿ 138 ಮೊದಲ ಬಾರಿ ಹಾಗೂ ಮೂವರು ಎರಡನೇ ಬಾರಿ ಗರ್ಭಿಣಿಯರಾಗಿ ರುವುದು ದಾಖಲಾಗಿದೆ.  ಚನ್ನಗಿರಿ ತಾಲ್ಲೂಕು ಒಂದರಲ್ಲೇ 58 ಅಪ್ರಾಪ್ತ ಗರ್ಭಿಣಿಯರು ದಾಖಲಾಗಿದ್ದಾರೆ.  ಉಳಿದಂತೆ ದಾವಣಗೆರೆ-28, ಹರಿಹರ-14, ಹೊನ್ನಾಳಿ-16, ಜಗಳೂರು-25 ಅಪ್ರಾಪ್ತರು ಗರ್ಭಿಣಿಯರಾಗಿರುವುದು ದಾಖಲಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಪ್ರತಿ ಕ್ರಿಯಿಸಿ, 18 ವರ್ಷದೊಳಗಿನ ಗರ್ಭಿಣಿಯರಿಗೆ ಇಲಾಖೆಯಿಂದ ಮಾತೃವಂದನಾ ಯೋಜನೆಯ ಸೌಲಭ್ಯ ದೊರಕುವುದಿಲ್ಲ.  ಇಂತಹ ಪ್ರಕರಣಗಳೆಲ್ಲವೂ ಬಾಲ್ಯ ವಿವಾಹ ಪ್ರಕರಣಗಳಿಗೇ ಸಂಬಂಧಪಡುತ್ತವೆ, 
ಆಯಾ ಸಿಡಿಪಿಒ ಹಾಗೂ ಡಿಸಿಪಿಯು ಗಳೇ ಈ ಪ್ರಕರಣಗಳಲ್ಲಿ ಕೇಸ್ ದಾಖಲು ಮಾಡಲು ಸಕ್ಷಮ ಪ್ರಾಧಿಕಾರಿಗಳಾಗಿದ್ದಾರೆ ಎಂದರು.