ಗುಣಮಟ್ಟ, ಬಹುಆಯ್ಕೆ ಉದ್ದೇಶಿತ ಎನ್‌ಇಪಿ

ವಿದ್ಯಾರ್ಥಿಗಳು ನೇರವಾಗಿ ಉದ್ಯೋಗಕ್ಕೆ ತೆರಳುವಂತೆ ಶಿಕ್ಷಣ : ಪ್ರೊ. ಎಸ್.ವಿ. ಹಲಸೆ

ದಾವಣಗೆರೆ, ಆ. 19 – ವಿದ್ಯಾರ್ಥಿಗಳಿಗೆ ಗುಣಮಟ್ಟದ, ಬಹು ಆಯ್ಕೆಯ, ಉದ್ಯೋಗ ಉದ್ದೇಶಿತ ಕೌಶಲ್ಯ ಹಾಗೂ ಅಗತ್ಯಕ್ಕೆ ಅನುಗುಣವಾದ ಪಠ್ಯ ನೀಡುವ ನೂತನ ಶಿಕ್ಷಣ ನೀತಿ (ಎನ್‌.ಇ.ಪಿ.) ಯನ್ನು ಸರ್ಕಾರದ ಧ್ಯೇಯೋದ್ಧೇಶ ಮತ್ತು ಯು.ಜಿ.ಸಿ. ಆದೇಶದ ಅನುಗುಣವಾಗಿ ಚಾಚೂ ತಪ್ಪದೆ ಜಾರಿಗೆ ತರಲಾಗುವುದು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಎಸ್.ವಿ. ಹಲಸೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳ ಅಗತ್ಯ ಮತ್ತು ಪದವಿಯ ಒಂದು ವರ್ಷದ ಕಲಿಕೆಯೂ ಉಪಯುಕ್ತ ವಾಗುವಂತೆ ನೀತಿ ರೂಪಿಸಲಾಗಿದೆ ಎಂದರು.

ಒಂದು ವರ್ಷಕ್ಕೂ ಮಾನ್ಯತೆ :  ನೂತನ ಶಿಕ್ಷಣ ಪದ್ಧತಿಯಲ್ಲಿ ಪದವಿ ನಾಲ್ಕು ವರ್ಷದ್ದಾಗಿದೆ. ಮೊದಲ ಎರಡು ಸೆಮಿಸ್ಟರ್‌ಗೆ ಸರ್ಟಿಫಿಕೇಟ್, 4 ಸೆಮಿಸ್ಟರ್‌ಗಳಿಗೆ ಡಿಪ್ಲೋ ಮಾ, 6 ಸೆಮಿಸ್ಟರ್‌ಗಳಿಗೆ ಪದವಿ ಹಾಗೂ ನಾಲ್ಕು ವರ್ಷಕ್ಕೆ ಹಾನರ್ಸ್ ನೀಡಲಾಗು ವುದು. ನಾಲ್ಕು ವರ್ಷ ಪೂರೈಸಿದ ನಂತರ ಸ್ನಾತಕೋತ್ತರದಲ್ಲಿ ಒಂದು ವರ್ಷ ಅಧ್ಯಯನ ಮಾಡಿದರೆ ಸಾಕು ಎಂದು ಹೇಳಿದರು.

ಹಳೆಯ ಸವಕಲಾಗಿದ್ದ ಪಠ್ಯವನ್ನು ಕೈ ಬಿಟ್ಟು ಹೊಸ ಪಠ್ಯ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚುವರಿ ಕೋರ್ಸ್‌ಗೆ ಹೋಗದೆ, ಅಪ್ರೆಂಟಿಸ್ ಮಾಡದೆ ನೇರವಾಗಿ ಕೆಲಸಕ್ಕೆ ತೆರಳಲು ಸಮರ್ಥರಾಗುವ ರೀತಿಯಲ್ಲಿ ಕೌಶಲ್ಯಾಧರಿತ ಶಿಕ್ಷಣ ನೀಡಲಾಗುವುದು ಎಂದರು.

 ಸೆ.6ರ ಒಳಗೆ ಪಠ್ಯ : ನೂತನ ಶಿಕ್ಷಣ ಪದ್ಧತಿಯ ಅನ್ವಯ ಮೊದಲ ಎರಡು ಸೆಮಿಸ್ಟರ್‌ಗಳ ಪಠ್ಯವನ್ನು ಸೆಪ್ಟೆಂಬರ್ 6ರ ಒಳಗೆ ರೂಪಿಸಲಾಗುವುದು. ಸ್ಥಳೀಯ ಅಗ ತ್ಯಗಳಿಗೆ ಅನುಗುಣವಾಗಿ ಪಠ್ಯವನ್ನು ಶೇ.30 ರವರೆಗೆ ರೂಪಿಸಿಕೊಳ್ಳಲು ವಿಶ್ವವಿದ್ಯಾನಿಲ ಯಗಳಿಗೆ ಅವಕಾಶ ವಿದೆ ಎಂದವರು ಹೇಳಿದರು.

ಸೌಲಭ್ಯದಂತೆ ಜಾರಿ : ಮೂಲಭೂತ ಸೌಲಭ್ಯಕ್ಕೆ ಅನುಗುಣವಾಗಿ ನಾಲ್ಕು ವರ್ಷದ ಪದವಿಯನ್ನು ಜಾರಿಗೆ ತರಲಾಗುತ್ತಿದೆ. ಒಂದೇ ಬಾರಿ ಹೊಸ ವ್ಯವಸ್ಥೆ ಜಾರಿಗೆ ಬರುವುದಿಲ್ಲ. ಸದ್ಯಕ್ಕೆ ಈಗಿರುವಂತೆ ಮೂರು ವರ್ಷದ ಪದವಿಯನ್ನು ಮುಂದುವರೆಸಬಹುದು ಎಂದ ಹಲಸೆ, ವಿಶ್ವವಿದ್ಯಾನಿಲಯದಲ್ಲಿ ಬಿಬಿಎ, ಬಿಕಾಂ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಗಣಿತ ಹಾಗೂ ಕಂಪ್ಯೂ ಟರ್ ಸೈನ್ಸ್‌ಗಳಿಗೆ ನಾಲ್ಕು ವರ್ಷದ ಪದವಿ ಜಾರಿಗೆ ತರಲಾಗಿದೆ ಎಂದರು.

ಹೆಚ್ಚು ಆಯ್ಕೆ : ವಿದ್ಯಾರ್ಥಿಗಳು ವಿಷಯಗಳನ್ನು ಆಯ್ದುಕೊಳ್ಳಲು ನೂತನ ಪದ್ಧತಿಯಲ್ಲಿ ಹೆಚ್ಚು ಆಯ್ಕೆ ನೀಡಲಾಗಿದೆ. ಎರಡು ಮೇಜರ್ ವಿಷಯಗಳ ಜೊತೆಗೆ, ತಾವು ಬಯಸುವ ಒಂದು ಮೈನರ್ ವಿಷಯವನ್ನು ಬೇರೆ ನಿಕಾಯದಿಂದ ಆಯ್ಕೆ ಮಾಡಿಕೊಳ್ಳ ಬಹುದು. ಉದಾಹರಣೆಗೆ ವಿಜ್ಞಾನದ ವಿದ್ಯಾರ್ಥಿ ಇತಿಹಾಸವನ್ನು ಮೈನರ್ ವಿಷಯ ವಾಗಿ ಆಯ್ಕೆ ಮಾಡಿಕೊಳ್ಳಬಹುದು. ಅದೇ ರೀತಿ ಬಿ.ಎ. ವಿದ್ಯಾರ್ಥಿಯೊಬ್ಬ ಗಣಿತ ಇಲ್ಲವೇ ಕಂಪ್ಯೂಟರ್ ಸೈನ್ಸ್ ಅನ್ನು ಮೈನರ್ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಕನ್ನಡ ಕಡ್ಡಾಯ : ನೂತನ ಶಿಕ್ಷಣ ಪದ್ಧತಿಯಲ್ಲಿ ಕನ್ನಡದ ಕಲಿಕೆ ಕಡ್ಡಾಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವವಿದ್ಯಾನಿಲಯದ ಕುಲಸಚಿವೆ ಡಾ. ಗಾಯತ್ರಿ ದೇವರಾಜ್, ಇದುವರೆಗೂ ಕನ್ನಡ ಎಲ್ಲರಿಗೂ ಕಡ್ಡಾಯ ಇರಲಿಲ್ಲ. ಈಗ ಮೊದಲ ನಾಲ್ಕು ಸೆಮಿಸ್ಟರ್‌ಗಳಿಗೆ ಕಾರ್ಯ ನಿರ್ವಹಿಸಬಹುದಾದ ಕನ್ನಡವನ್ನಾದರೂ ಕಲಿಯುವುದು ಕಡ್ಡಾಯ ಎಂದು ಹೇಳಿದರು.

ಹೆಚ್ಚು ಜನ ಪದವಿಗೆ : ಪದವಿಯ ಮೊದಲ ವರ್ಷಕ್ಕೂ ಸರ್ಟಿಫಿಕೇಟ್‌ ನೀಡುವುದರಿಂದ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಬೀಳಲಿದ್ದಾರೆ ಎಂಬ ಆತಂಕವನ್ನು ತಳ್ಳಿ ಹಾಕಿದ ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ, ಮೂರು ವರ್ಷ ಪದವಿ ಪೂರ್ಣಗೊಳಿಸದಿದ್ದರೆ ಡ್ರಾಪೌಟ್ ಎಂಬ ಕಾರಣಕ್ಕಾಗಿ ಸಾಕಷ್ಟು ಜನರು ಉನ್ನತ ಶಿಕ್ಷಣಕ್ಕೆ ಬರುತ್ತಿಲ್ಲ. ಈಗ ಎಲ್ಲ ಹಂತದ ಕಲಿಕೆಗೆ ಮಾನ್ಯತೆ ನೀಡುವುದರಿಂದ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬರಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವೆ ಹೆಚ್.ಎಸ್.ಅನಿತ, ಹಣಕಾಸು ಅಧಿಕಾರಿ ಪ್ರಿಯಾಂಕ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರೊ. ಮಹಾಬಲೇಶ್ವರ, ಡೀನ್‌ಗಳಾದ ಪ್ರೊ. ರಂಗಪ್ಪ, ಪ್ರೊ. ವೆಂಕಟೇಶ್, ಪ್ರೊ. ಶಿವಕುಮಾರ್ ಕಣಸೋಗಿ ಮತ್ತಿತರರು ಉಪಸ್ಥಿತರಿದ್ದರು.