ತವರು ಮನೆಯವರಿಗೆ ಆತಿಥ್ಯ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅತ್ತೆ, ಮಾವ !

ದಾವಣಗೆರೆ, ಆ.10- ತವರು ಮನೆಯಿಂದ ಬಂದವರಿಗೆ ಆತಿಥ್ಯ ನೀಡಿದ್ದ ಕಾರಣ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ವಿದ್ಯಾನಗರದಲ್ಲಿ ನಿನ್ನೆ ನಡೆದಿದೆ. 

ಹಲ್ಲೆಗೊಳಗಾದ ನೇತ್ರಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಮೂಲದ ನೇತ್ರಾ ಕಳೆದ ಒಂದೂವರೆ ವರ್ಷದ ಹಿಂದೆ ನಗರದ ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ ರೋಹಿತ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕೆಲ ತಿಂಗಳುಗಳಿಂದ ರೋಹಿತ್ ತಂದೆ, ತಾಯಿ ನೇತ್ರಾಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ನೇತ್ರಾ ತವರು ಮನೆಯವರು ಬಂದಾಗ ಅವರನ್ನು ಪತಿ ರೋಹಿತ್ ಅವರ ಪೋಷಕರನ್ನು ಮಾತನಾಡಿಸದೆ, ಅತಿಥ್ಯ ನೀಡದೆ ಇರುತ್ತಿದ್ದರು. ಇದರಿಂದ ಹಲವು ಬಾರಿ ಸಣ್ಣ – ಪುಟ್ಟ ಜಗಳಗಳೂ ಕೂಡ ಆಗಿದ್ದವಂತೆ. ಸೋಮವಾರ ಕೂಡ ನೇತ್ರಾ ಪೋಷಕರು ಬಂದಾಗ ಜಗಳವಾಗಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಅತ್ತೆ, ಮಾವ ಹಾಗೂ ಗಂಡ ಸೇರಿ ಇಳಿಗೆ ಮಣೆಯಿಂದ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ತಪ್ಪಿಸಿಕೊಂಡು ತೀವ್ರ ರಕ್ತಸ್ರಾವದಿಂದ ಮನೆಯ ಹೊರಗಡೆ ಓಡಿ ಬಂದ ನೇತ್ರಾಳನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ನೇತ್ರಾ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.