ಜಿಲ್ಲೆಗೆ ಹೆಚ್. ಶಿವಪ್ಪನವರ ಕೊಡುಗೆ ಅಪಾರ

ಜಿಲ್ಲೆಗೆ ಹೆಚ್. ಶಿವಪ್ಪನವರ ಕೊಡುಗೆ ಅಪಾರ

ದಿ. ಹೆಚ್. ಶಿವಪ್ಪನವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜಯ ಮೃತ್ಯುಂಜಯ ಶ್ರೀ

ಹರಿಹರ, ಆ.10- ದಾವಣಗೆರೆ ಜಿಲ್ಲೆಗೆ ಮಾಜಿ ಸಚಿವ ಹೆಚ್. ಶಿವಪ್ಪ ಅವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆಗಾಗಿ ಸ್ವಾಭಿಮಾನಿ ಹೆಚ್. ಶಿವಪ್ಪನವರ ಪುಣ್ಯಸ್ಮರಣೆಯನ್ನು ಆಚರಣೆಗೆ ತಂದರೆ ಸೂಕ್ತವಾಗಿರುತ್ತದೆ ಎಂದು ಪಂಚಮಸಾಲಿ ಗುರುಪೀಠದ ಅಧ್ಯಕ್ಷರಾದ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಅಭಿಮಾನಿ ಬಳಗದ ವತಿಯಿಂದ ಇಂದು ಏರ್ಪಾಡಾಗಿದ್ದ ಮಾಜಿ ಸಚಿವ ದಿ. ಹೆಚ್. ಶಿವಪ್ಪನವರ 8ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಶಿವಪ್ಪ ಅವರು ಎಲ್ಲಾ ವರ್ಗದ ಬಡವರ ಏಳಿಗೆಗಾಗಿ ಶ್ರಮವಹಿಸಿ ಉತ್ತಮ ಕೆಲಸ ಮಾಡಿದ್ದರಿಂದ ಇಂದಿಗೂ ಅವರು ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರಲ್ಲಿದ್ದ ಸ್ವಾಭಿಮಾನದ ಗುಣ, ಹೋರಾಟದ ಕಿಚ್ಚು, ಧರ್ಮನಿಷ್ಠೆ, ಬಡವರ ಬಗ್ಗೆ ಕಾಳಜಿ ಇವುಗಳಿಂದ ಜನಪ್ರಿಯತೆ ಗಳಿಸಿದ್ದರಿಂದಾಗಿ ಜೆ.ಹೆಚ್.  ಪಟೇಲ್ ಅವರನ್ನು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರನ್ನಾಗಿ ಮಾಡುವುದಕ್ಕೆ ದಾರಿಯಾಯಿತು. ರಾಜ್ಯದಲ್ಲಿ ಲಿಂಗಾಯತ ಸಮಾಜದಲ್ಲಿ ಎಸ್. ನಿಜಲಿಂಗಪ್ಪ, ಜೆ.ಹೆಚ್. ಪಟೇಲ್ ನಂತರದಲ್ಲಿ ಹೆಚ್. ಶಿವಪ್ಪನವರ ರಾಜಕೀಯ ನಡೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಾಗಲಿಲ್ಲ ಎಂದರು.

ಮುಖ್ಯಮಂತ್ರಿಗಳಾಗುವ ಎಲ್ಲಾ ಅರ್ಹತೆಯನ್ನು ಹೆಚ್. ಶಿವಪ್ಪ ಹೊಂದಿದ್ದರು. ರಾಜ್ಯದ ಪ್ರತಿಯೊಂದು ಮನೆಗಳಲ್ಲಿ ನಿಜಲಿಂಗಪ್ಪ, ಹೆಗಡೆ, ಜೆ.ಹೆಚ್‌. ಪಟೇಲ್ ಅವರ ಪೋಟೋ ಇದ್ದಂತೆ ಹರಿಹರ ತಾಲ್ಲೂಕಿನ ಹಲವಾರು ಮನೆಗಳಲ್ಲಿ ಶಿವಪ್ಪನವರ ಫೋಟೋ ಹಾಕಿದ್ದಾರೆ ಎಂದರೆ ಅವರಲ್ಲಿ ಇದ್ದ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತದೆ. ಅವರಂತೆ ಪುತ್ರ ಶಿವಶಂಕರ್ ಅವರೂ ಸಹ ತಾಲ್ಲೂಕಿನಲ್ಲಿ ಉತ್ತಮ ಜನಪ್ರಿಯತೆ ಗಳಿಸಿ, ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರೆ, ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡಿ ಎಂದು ಬಿಜೆಪಿಯನ್ನು ಕೇಳಿಕೊಂಡು ಬಂದಿದ್ದೆವು. ಅದರಂತೆ ಉತ್ತರ ಕರ್ನಾಟಕ ಭಾಗದವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ. ನಮ್ಮ ಸಮಾಜಕ್ಕೆ ಹೆಚ್ಚು ಮಂತ್ರಿಗಳ ಸ್ಥಾನವನ್ನು ನೀಡಿ ಎಂದು ಕೇಳುವುದಿಲ್ಲ. ಆದರೆ, ನಮ್ಮ ಸಮಾಜದಲ್ಲಿ ಹೆಚ್ಚು ಬಡವರು ಇದ್ದಾರೆ. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮೀಸಲಾತಿ ನೀಡಿ ಎನ್ನುವೆ. ಮುಂದಿನ ದಿನಗಳಲ್ಲಿ ಅದನ್ನು ಹೋರಾಟದ ಫಲವಾಗಿ ಪಡೆಯುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

ಬೇಲೂರು ಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಧರ್ಮ ಉಳಿಯಬೇಕಾದರೆ ನಾಗರಿಕ ಮೌಲ್ಯವನ್ನು ಹೊಂದಿರವ ಕುಟುಂಬದ ಅವಶ್ಯಕತೆ ಇದೆ. ಬಹಳ ಜನರಿಗೆ ಕುಟುಂಬದ ಅರಿವೂ ಸಹ ಇರುವುದಿಲ್ಲ. ನಮಗೆ ಸಮಾಜದಲ್ಲಿ ಘನತೆ ಗೌರವ ಸಿಗಬೇಕಾದರೆ ತಂದೆ ತಾಯಿಯ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಸ್ವಾಮಿಗಳನ್ನು ಬೆನ್ನು ಹತ್ತದೆ ತಂದೆ-ತಾಯಿಯನ್ನು ಪ್ರೀತಿಸಬೇಕು. ಕಾರಣ ಮಕ್ಕಳಿಗೆ ದೇಶದಲ್ಲಿ ತಂದೆ-ತಾಯಿ ಮೇಲೆ ನಿರ್ಲಕ್ಷ್ಯ ಭಾವನೆ ಬಂದಿದ್ದರಿಂದ 18 ಸಾವಿರ ವೃದ್ಧಾಶ್ರಮಗಳು ತೆರೆದುಕೊಂಡಿವೆ ಎಂದು ವ್ಯಾಕ್ಯುಲತೆ ವ್ಯಕ್ತಪಡಿಸಿದರು.

ಲಾಲ್ ಬಹಾದ್ದೂರ್ ಶಾಸ್ತ್ರಿಯಂತಹವರು ರಾಜಕೀಯಕ್ಕೆ ಬಂದರೆ ರಾಜಕೀಯ ವ್ಯವಸ್ಥೆ ಸುಧಾರಣೆ ಕಾಣುತ್ತದೆ. ಖಾವಿ ಡೇಂಜರ್ ಅಲ್ಲ ಅದರಲ್ಲಿ ಹೊಳ ಹೊಕ್ಕಿರುವ ಖಾದಿ ಬಹಳ ಡೇಂಜರ್ ಆಗಿ ಇಂದಿನ ರಾಜಕೀಯ ವ್ಯವಸ್ಥೆ ಅಧೋಗತಿಯತ್ತ ಸಾಗುತ್ತಿದೆ.‌ ಸ್ವಾರ್ಥದ ರಾಜಕಾರಣದಿಂದಾಗಿ ದೇಶವು ಅರಾಜಕತೆಯತ್ತ ಸಾಗುತ್ತಿದೆ. ಅಭಿವ್ಯಕ್ತಿ ಹಾಗೂ ಭಾವೈಕ್ಯತೆ ರಾಜಕಾರಣ ಬರಬೇಕಾಗಿದೆ. ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಮಠಗಳು ಹೆಚ್ಚು ಆದ್ಯತೆಯನ್ನು ನೀಡಬೇಕಾಗುತ್ತದೆ. ಜಾತಿ ಉಳಿದರೆ ಇತಿಹಾಸ ಉಳಿಯುವುದಿಲ್ಲ. ಕುಟುಂಬವು ಉಳಿದರೆ ಮಾತ್ರ ಇತಿಹಾಸ ಉಳಿಯುತ್ತದೆ‌. ನಾವೆಲ್ಲರೂ ಬದಲಾವಣೆ ಆಗಬೇಕಾದರೆ ಸಂಸ್ಕೃತಿ, ಸಂಸಾರ ಉಳಿಸಿ ಬೆಳೆಸಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.    

ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿದರು.

ಮಾಜಿ ಶಾಸಕ ಹೆಚ್.ಎಸ್.  ಶಿವಶಂಕರ್ ಮಾತನಾಡಿ, ಭದ್ರಾ ಕಾರ್ಖಾನೆ ವಿಚಾರವಾಗಿ ರಾಜಕೀಯದಲ್ಲಿ ಯೋಗ್ಯತೆ ಇಲ್ಲದವರು ಹಗುರವಾದ ಮಾತುಗಳನ್ನು ಆಡುತ್ತಿದ್ದಾರೆ. ಹೆಚ್. ಶಿವಪ್ಪನವರ ಆತ್ಮ ಇಂದಿಗೂ ಕಾರ್ಖಾನೆಯ ಸುತ್ತಲೂ ಇದೆ. ಅದನ್ನು ಹಲವರು ಹರಾಜು ಹಾಕಲು ಹೊರಟಿದ್ದರು. ಅದನ್ನು ತಡೆಯುವ ಮೂಲಕ ಶಿವಶಂಕರ್ ಶಕ್ತಿ ಏನು ಎಂಬುದನ್ನು ತೋರಿಸಲಾಗಿದೆ. ಕೆಲವರು ನನ್ನ ಬಗ್ಗೆ ಹಗುರವಾದ ಮಾತುಗಳನ್ನು ಆಡುತ್ತಾ ವಾಟ್ಸಾಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹರಿದು ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದನ್ನು ಮಾಡುವುದನ್ನು ಬಿಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಾ ಭೀಷ್ಮ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆಯ ಶ್ರೀ ಬಸವ ಪ್ರಭು ಸ್ವಾಮೀಜಿ, ತುಮ್ಮಿನಕಟ್ಟೆ  ಶ್ರೀ ಪ್ರಭುಲಿಂಗ ಸ್ವಾಮೀಜಿ, ಸಿದ್ಧಾರೂಢ ಮಠದ ಯೋಗಾನಂದ ಶ್ರೀಗಳು ಯಲವಟ್ಟಿ, ಫಾದರ್ ಅಂತೋಣಿ ಪೀಟರ್‌, ಶ್ರೀ ಮಹಾಂತ ಸ್ವಾಮೀಜಿ ಗದಗ, ರಾಘವೇಂದ್ರ ಸ್ವಾಮಿ ಮಠದ ವರಹಾಚಾರ್, ಹೆಚ್.ಎಸ್. ಅರವಿಂದ್, ನಗರಸಭೆ ಅಧ್ಯಕ್ಷರಾದ ರತ್ನ ಡಿ‌. ಉಜ್ಜೇಶ್,  ಹುಲುಗಿನಹೊಳೆ ಚಂದ್ರಯ್ಯ, ಪರಮೇಶ್ವರ ಗೌಡ್ರು, ಬಿ. ಚಿದಾನಂದಪ್ಪ ಮಲೇಬೆನ್ನೂರು, ದಾವಣಗೆರೆಯ ಎನ್.ಜಿ. ಪುಟ್ಟಸ್ವಾಮಿ, ಮೋತಿ ಸೈಕಲ್ ಮಾರ್ಟ್‌ನ ಟಿ.ಶಂಕ್ರಪ್ಪ, ಒಣರೊಟ್ಟಿ ಮಹಾಂತೇಶ್, ನಗರ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್, ಎ.ಕೆ. ನಾಗಪ್ಪ, ಹರಿಹರ ನಗರಸಭೆ ಸದಸ್ಯರಾದ ಉಷಾ ಅಂಗಡಿ ಮಂಜುನಾಥ್, ವಿರೂಪಾಕ್ಷ, ನಿಂಬಕ್ಕ ಚಂದಾಪೂರ್,  ಆರ್.ಸಿ. ಜಾವೇದ್,  ಜಂಬಣ್ಣ ಗುತ್ತೂರು, ದಿನೇಶ್ ಬಾಬು, ರೇವಣಸಿದ್ದಪ್ಪ ಅಂಗಡಿ, ಬೇಡರ್ ಮಾರುತಿ, ರಾಜು, ಲತಾ ಕೊಟ್ರೇಶ್, ರಾಗಿಣಿ ಪ್ರಕಾಶ್, ಲಕ್ಷ್ಮಿ ರಾಜಚಾರ್, ಟಿ. ಓಬಳಪ್ಪ, ಟಿ.ಜೆ. ಮುರುಗೇಶಪ್ಪ, ಎಸ್.ಹೆಚ್. ಪ್ಯಾಟಿ, ನಂಜಪ್ಪ, ನಾಗರಾಜ್ ಅಮರಾವತಿ, ಕುಮಾರ್, ಮಲೇಬೆನ್ನೂರು ಬಸವರಾಜ್, ಸುರೇಶ್ ಚಂದಪೂರ್ ಇನ್ನಿತರರಿದ್ದರು.