ಕೊರೊನಾ ಇಳಿಕೆ, `ಸ್ಯಾರಿ’ ಏರಿಕೆ

ಟೆಸ್ಟ್ ನೆಗೆಟಿವ್ ಬಂದರೂ ಸೋಂಕು ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಮಾಡದಂತೆ ಡಿಸಿ ಕರೆ

ನಿಯಮ ಮೀರಿ ಕಾಲೇಜು ನಡೆಸಿದರೆ ಕ್ರಮ: ಡಿಸಿ

ಕಾಲೇಜುಗಳು ನಿಯಮ ಮೀರಿ ಪ್ರವೇಶ ಕಲ್ಪಿಸಿದರೆ ಹಾಗೂ ತರಗತಿಗಳನ್ನು ನಡೆಸುತ್ತಿದರೆ ಕ್ರಮ ತೆೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದ್ದಾರೆ.

ಕೆಲ ಕಾಲೇಜುಗಳು ಸರ್ಕಾರದ ಅನುಮತಿ ಇಲ್ಲದೆಯೇ ಪಿ.ಯು.ಸಿ. ತರಗತಿಗಳನ್ನು ನಡೆಸುತ್ತಿವೆ ಹಾಗೂ ಹಾಸ್ಟೆಲ್‌ಗಳಿಗೆ ಪ್ರವೇಶ ನೀಡಿವೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಎಚ್ಚರಿಕೆ ನೀಡಿದ್ದು, ಹಠಾತ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ದಾವಣಗೆರೆ, ಅ. 10 – ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು ಇಳಿದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಉಸಿರಾಟದ ತೊಂದರೆಯಿಂದ ದಾಖಲಾಗುವ ಸ್ಯಾರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಟೆಸ್ಟ್‌ನಲ್ಲಿ ನೆಗೆಟಿವ್ ಬಂದರೂ, ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದರೆ ಜನರು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಟಿ.-ಪಿ.ಸಿ.ಆರ್. ಟೆಸ್ಟ್ ಅನ್ನು §ಗೋಲ್ಡ್¬ (ನಿಖರ) ಎಂದು ಈಗ ಪರಿಗಣಿಸಲಾಗದು ಎಂದು ಪರಿಣಿತರು ಹೇಳಿದ್ದಾರೆ. ಹೀಗಾಗಿ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂತು ಎಂದು ನಿರ್ಲಕ್ಷ್ಯ ತೋರಬಾರದು. ಕೊರೊನಾ ಸೋಂಕಿನ ಸಣ್ಣ ಲಕ್ಷಣ ಬಂದರೂ ಕಾಳಜಿ ವಹಿಸಬೇಕು ಎಂದವರು ಹೇಳಿದರು.

ಸೋಮವಾರ ಜಿಲ್ಲೆಯಲ್ಲಿ 7 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 82 ಸಕ್ರಿಯ ಪ್ರಕರಣಗಳಿವೆ. 118 ಜನರು ಗುಣಮುಖರಾಗಿದ್ದರೂ ದಾಖಲೆಗಳಲ್ಲಿ ಸಕ್ರಿಯ ಎಂದೇ ಮುಂದುವರೆದಿದ್ದು, ಇವರನ್ನು ಸಕ್ರಿಯ ಪಟ್ಟಿಯಿಂದ ಕೈ ಬಿಡುವಂತೆ ಪ್ರಸ್ತಾವನೆ ಕಳಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿ ನಡೆಸಲಾದ ಟೆಸ್ಟ್‌ಗಳಲ್ಲಿ ಕೊರೊನಾ ಸೋಂಕಿತರು ಕಂಡು ಬರುವ ಪ್ರಮಾಣ ಶೇ.1ಕ್ಕೂ ಕಡಿಮೆ ಇದೆ. ಹೀಗೆಂದು ಜನ ಮೈ ಮರೆಯಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಸ್ಯಾರಿ ಪ್ರಕರಣಗಳಿಂದ ಇತ್ತೀಚೆಗೆ ಒಂದೆರಡು ಸಾವುಗಳು ಸಂಭವಿಸಿವೆ ಎಂದು ತಿಳಿಸಿದರು.

ಯಾವುದೇ ಆರಾಧನಾ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಇಷ್ಟಾದರೂ ಕೆಲ ದೇವಸ್ಥಾನಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು ಕಂಡು ಬಂದಿದ್ದು, ಆ ಬಗ್ಗೆ ಸೂಚನೆ ನೀಡಲಾಗಿದೆ. ಯಾರೇ ಆಗಲಿ ಜಿಲ್ಲಾಡಳಿತಕ್ಕೆ ಮುಜುಗರ ಆಗುವ ರೀತಿ ಕೆಲಸ ಮಾಡಬಾರದು ಎಂದವರು ತಿಳಿಸಿದರು.

ಜನರು ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕಿದೆ. ಈ ಬಗ್ಗೆ ಜನರಿಗೆ ಎಚ್ಚರಿಕೆಯ ಸೂಚನೆಗಳನ್ನು ನೀಡಲಾಗುತ್ತಿದ್ದು, ಮಾಸ್ಕ್ ಅಭಿಯಾನ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಬೀಳಗಿ ಹೇಳಿದರು.

ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಕಾರಣದಿಂದ ನಾಲ್ಕು ಸಾವುಗಳು ಸಂಭವಿಸಿರುವುದನ್ನು ಗುರು ತಿಸಲಾಗಿದೆ. ಬ್ಲಾಕ್ ಫಂಗಸ್ ಸೋಂಕಿತ ರಿಗೆ ಅಗತ್ಯ ಔಷಧಿ ಖರೀದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಸ್ಪತ್ರೆಯಾದ ಸಿ.ಜಿ. ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಸರಿ ಇಲ್ಲ ಹಾಗೂ ರಕ್ತ ಮಾಪಕಗಳ ಪರಿಶೀಲನೆ ಯಂತ್ರ ಸರಿ ಇಲ್ಲ ಎಂದು ಟೆಸ್ಟ್‌ಗಾಗಿ ಹೊರಗೆ ಕಳಿಸಲಾಗುತ್ತಿದೆ ಎಂಬ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದವರು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈಗ 30 ಜನ ಕೊರೊನಾ ಸಕ್ರಿಯ ಸೋಂಕಿತರಿದ್ದಾರೆ. ಒಟ್ಟು 25 ಗ್ರಾಮಗಳಲ್ಲಿ ಸೋಂಕಿತರು ಕಂಡು ಬಂದಿದ್ದಾರೆ ಮೂರನೇ ಅಲೆ ತಡೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಗ್ರಾಮ ಪಡೆಗಳನ್ನು ಚುರುಕುಗೊಳಿಸಲಾಗುತ್ತಿದೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಡಿ.ಹೆಚ್.ಒ. ಡಾ. ನಾಗರಾಜ್  ಉಪಸ್ಥಿತರಿದ್ದರು.